ಕಾಸರಗೋಡು: ಕೇರಳದಲ್ಲಿ ಲೆವೆಲ್‍ಕ್ರಾಸಿಂಗ್ ಸಂಪೂರ್ಣ ಹೊರತುಪಡಿಸಿ, ರಸ್ತೆಅಭಿವೃದ್ಧಿ ನಡೆಸುವುದು ಸರ್ಕಾರದ ಪ್ರಮುಖ ಧ್ಯೇಯವಾಗಿದೆ ಎಂದು ರಾಜ್ಯ ಲೋಕೋಪಯೋಗಿ ಖಾತೆ ಸಚಿವ ಪಿ.ಎ ಮಹಮ್ಮದ್ ರಿಯಾಸ್ ತಿಳಿಸಿದ್ದಾರೆ.
ಅವರು ಸೋಮವಾರ ಕಾಞಂಗಾಡು ಕೋಟಚ್ಚೇರಿ ರೈಲ್ವೆ ಮೇಲ್ಸೇತುವೆ ಉದ್ಘಾಟಿಸಿ ಮಾತನಾಡಿದರು. ಕೇರಳವನ್ನು ಲೆವೆಲ್‍ಕ್ರಾಸಿಂಗ್ ರಹಿತ ರಾಜ್ಯವನ್ನಾಗಿಸುವ ಕನಸಿನ ಯೋಜನೆ ಸಾಕಾರಗೊಳಿಸಲು ಎಲ್ಲ ಇಲಾಖೆ ಹಾಗೂ ಜನಪ್ರತಿನಿಧಿಗಳನ್ನು ಒಂದುಗೂಡಿಸಿ ಮುಂದುವರಿಯುವಂತೆ ಮಾಡಲು ಲೋಕೋಪಯೋಗಿ ಇಲಾಖೆ ನೇತೃತ್ವ ವಹಿಸಲಿದೆ. ಇತರ ತಡೆಗಳಿಲ್ಲದೇ ಇದ್ದಲ್ಲಿ, ಈ ವರ್ಷ ರಾಜ್ಯದಲ್ಲಿ ಒಂಬತ್ತು ರೈಲ್ವೆ ಮೇಲ್ಸೇತುವೆಗಳನ್ನು ರೋಡ್ ಏಂಡ್ ಬ್ರಿಡ್ಜಸ್ ಡೆವೆಲಪ್‍ಮೆಂಟ್ ಕಾರ್ಪೋರೇಶನ್ ಪೂರ್ತಿಗೊಳಿಸಲಿದೆ. ಇದರ ಕಾಮಗಾರಿ 2023ರ ವೇಳೆಗೆ ಪೂರ್ತಿಗೊಳ್ಳಲಿದೆ. ರಾಜ್ಯದಲ್ಲಿ ಲೆವೆಲ್‍ಕ್ರಾಸಿಂಗ್ ರಹಿತ ಯೋಜನೆ ಪೂರ್ತಿಗೊಳ್ಳಬೇಕಾದರೆ, ಇನ್ನೂ 72ಮೇಲ್ಸೇತುವೆಗಳನ್ನು ನಿರ್ಮಿಸಬೇಕಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದ ನೂರು ದಿವಸಗಳ ಕ್ರಿಯಾ ಯೋಜನೆಯನ್ವಯ ಲೆವೆಲ್‍ಕ್ರಾಸಿಂಗ್ ಕಾಮಗಾರಿ ಪೂರ್ತಿಗೊಳಿಸಲಾಗಿದೆ.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಚ್ ಕುಞಂಬು, ಮಾಜಿ ಸಂಸದ ಪಿ.ಕರುಣಾಕರನ್, ಜಿಲ್ಲಾಧಿಕಾರಿ ಭಂಡಾರಿ ಸವಾಗತ್ ರಣವೀರ್‍ಚಂದ್, ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ ಸುಜಾತಾ, ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠನ್ ಮುಂತಾದವರು ಪಾಲ್ಗೊಂಡಿದ್ದರು.