ತಿರುವನಂತಪುರಂ: ಶ್ರೀಲಂಕಾ ನಿರಾಶ್ರಿತರು ಕೇರಳ ಪ್ರವೇಶಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಝಿಂಜಂನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇತರ ಕರಾವಳಿ ಪ್ರದೇಶಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ವಿಝಿಂಜಂನಲ್ಲಿ ಹೆಚ್ಚಿನ ಪೋಲೀಸರು ಮತ್ತು ಕೋಸ್ಟ್ ಗಾರ್ಡ್ ಗಳನ್ನು ನಿಯೋಜಿಸಲಾಗಿದೆ. ಎರಡೂ ಕಡೆಯವರು ಜಂಟಿಯಾಗಿ ಕರಾವಳಿ ಪ್ರದೇಶಗಳಲ್ಲಿ ನಿಗಾ ಇರಿಸಿದ್ದಾರೆ. ಅನುಮಾನಾಸ್ಪದ ನಡೆ ಕಂಡು ಬಂದಲ್ಲಿ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಕೇರಳ ಹೊರತುಪಡಿಸಿ ತಮಿಳುನಾಡು ಕರಾವಳಿ ಮೂಲಕ ನಿರಾಶ್ರಿತರು ದೇಶ ಪ್ರವೇಶಿಸುವ ಸಾಧ್ಯತೆ ಇದೆ.
ಶ್ರೀಲಂಕಾ ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವೂ ದುಬಾರಿಯಾಗಿರುವುದರಿಂದ ಅಲ್ಲಿ ಜನಜೀವನ ಅಸಹನೀಯವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಭಾರತಕ್ಕೆ ಗುಳೆ ಹೋಗಲು ತಯಾರಿ ನಡೆಸಿದ್ದಾರೆ. ಇದಕ್ಕೂ ಮುನ್ನ ತಮಿಳುನಾಡಿನ ಧನುಷ್ಕೋಟಿಗೆ ಆಗಮಿಸಿದ್ದ ಶ್ರೀಲಂಕಾ ಜನರಿದ್ದ ತಂಡವನ್ನು ಕೋಸ್ಟ್ ಗಾರ್ಡ್ ಪಡೆ ಬಂಧಿಸಿತ್ತು.