ನವದೆಹಲಿ: ಭಾರತದ ಶಕ್ತಿಯು ಅದರ ಪ್ರತಿಯೊಬ್ಬ ನಾಗರಿಕನ ಶಕ್ತಿಯಲ್ಲಿದೆ ಎಂಬುದನ್ನು ಗಮನಿಸುತ್ತಾ, ಈ ಶಕ್ತಿಯನ್ನು ಹೆಚ್ಚಿಸಲು ಸರ್ಕಾರ ಉಚಿತ ಆಹಾರ ಧಾನ್ಯ ವಿತರಣೆಯ ಗರೀಬ್ ಕಲ್ಯಾಣ ಯೋಜನೆಯನ್ನು ಮುಂದಿನ ಆರು ತಿಂಗಳ ಕಾಲ ವಿಸ್ತರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಈ ಯೋಜನೆ ಇದೀಗ ಸೆಪ್ಟಂಬರ್ ವರೆಗೂ ವಿಸ್ತರಣೆಯಾಗಿದ್ದು, ಸುಮಾರು 80 ಕೋಟಿಗೂ ಹೆಚ್ಚು ಜನರು ಮೊದಲಿನಂತೆ ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಡವರಿಗೆ ನೆರವು ನೀಡಲು ಈ ವರ್ಷದ ಸೆಪ್ಟೆಂಬರ್ ವರೆಗೂ ಉಚಿತ ಆಹಾರ ಧಾನ್ಯ ವಿತರಣೆ ಯೋಜನೆ ಪಿಎಂಜಿಕೆಎವೈಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಕೊರೋನಾ ಸಾಂಕ್ರಾಮಿಕದ ಅವಧಿಯಲ್ಲಿ ಜನರ ಕಷ್ಟಗಳನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಒಳಗೊಂಡಿರುವ 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅನ್ನು ಪ್ರಾರಂಭಿಸಿತು.