ಪಟನಾ: ರಸ್ತೆ ಮಧ್ಯೆ ಭಿಕ್ಷೆ ಬೇಡುತ್ತಿದ್ದ ಯುವತಿಯೊಬ್ಬಳು ಇಂದು ಒಂದು ಕಂಪನಿಯ ಮ್ಯಾನೇಜರ್ ಅಂದರೆ ನೀವು ನಂಬುತ್ತೀರಾ? ನಂಬಲು ಆಗದಿದ್ದರೂ ಇದೇ ವಾಸ್ತವ ಎನ್ನುವುದು ನಿಜ. ಅನಿರೀಕ್ಷಿತ ಜೀವನದಲ್ಲಿ ಕಾಲ ಹೇಗೆ ಕೆಲವೊಮ್ಮೆ ಬದಲಾಗುತ್ತದೆ ಎಂಬುದಕ್ಕೆ ಈ ಮಹಿಳೆಯ ಜೀವನವೇ ಒಂದು ಉತ್ತಮ ಉದಾಹರಣೆ.
ಕತೆಯ ಕಡೆಗೆ ಬರೋಣ… ಈ ಘಟನೆ 19 ವರ್ಷದ ಹಿಂದೆ ಬಿಹಾರ ರಾಜಧಾನಿ ಪಟನಾದಲ್ಲಿ ನಡೆಯಿತು. ತಾಯಿಯೊಬ್ಬಳು ತನ್ನ ಮಗುವನ್ನು ಕಸದ ತೊಟ್ಟಿಗೆ ಎಸೆದು ಹೋಗಿದ್ದಳು. ಈ ವೇಳೆ ಹಸುಗೂಸು ಅಳುತ್ತಾ ಕಸದ ತೊಟ್ಟಿಗೆಯೊಳಗೆ ಬಿದ್ದಿತ್ತು. ಇದೇ ಸಂದರ್ಭದಲ್ಲಿ ಕರಿದೇವಿ ಎಂಬಾಕೆ ಭಿಕ್ಷೆ ಬೇಡುತ್ತಾ ಬರುವಾಗ ಮಗಳು ಅಳುವ ಶಬ್ದವನ್ನು ಕೇಳಿದರು. ತಕ್ಷಣ ಶಬ್ದದ ಕಡೆ ಹೋಗಿ ನೋಡಿದಾಗ ಕಸದ ತೊಟ್ಟಿಯಲ್ಲಿ ಮಗು ಬಿದ್ದಿರುವುದನ್ನು ನೋಡಿ ಜೋರಾಗಿ ಕೂಗಿಕೊಳ್ಳುತ್ತಾರೆ. ಯಾರೂ ಬರದಿದ್ದಾಗ ಏನು ಮಾಡಬೇಕೆಂದು ತೋಚದೇ ಕೆಲ ಕಾಲ ಅಲ್ಲಿಯೇ ಯೋಚನೆ ಮಾಡುತ್ತಾರೆ. ನಾನೇ ಓರ್ವ ಭಿಕ್ಷುಕಿ. ಈ ಮಗುವನ್ನು ತೆಗೆದುಕೊಂಡು ಹೋಗಿ ನಾನು ಹೇಗೆ ಸಾಕಲಿ ಎಂದು ಯೋಚಿಸಿದಾದರೂ ಮಾನವೀಯತೆ ದೃಷ್ಟಿಯಿಂದ ಮಗುವನ್ನು ಕಸದ ತೊಟ್ಟಿಯಿಂದ ಎತ್ತುಕೊಂಡು ತಾನು ವಾಸವಿದ್ದ ಕಡೆಗೆ ಹೋಗುತ್ತಾರೆ.
ಮಗುವಿಗೆ ಕರಿದೇವಿ ಜ್ಯೋತಿ ಎಂದು ಹೆಸರಿಡುತ್ತಾರೆ. ಭಿಕ್ಷೆ ಬೇಡಿ, ಚಿಂದಿ ಆಯ್ದು ಅದರಿಂದ ಬಂದ ಹಣದಲ್ಲಿ ಮಗುವನ್ನು ಸಾಕುತ್ತಾಳೆ. ಜ್ಯೋತಿಯು ಸ್ವಲ್ಪ ಬೆಳೆದ ಮೇಲೆ ಭಿಕ್ಷೆ ಬೇಡುತ್ತಾ ಮತ್ತು ಚಿಂದಿ ಆಯುತ್ತಾ ಸಾಕು ತಾಯಿಗೆ ಸಹಾಯ ಮಾಡುತ್ತಿರುತ್ತಾಳೆ. ಆದರೆ, ಅನಾರೋಗ್ಯದಿಂದ ಕರಿದೇವಿ ಮೃತಪಡುತ್ತಾಳೆ. ಆ ಸಮಯದಲ್ಲಿ ಜ್ಯೋತಿಗೆ 12 ವರ್ಷ ವಯಸ್ಸಾಗಿರುತ್ತದೆ. ಇದಾದ ಬಳಿಕ ರ್ಯಾಂಬೋ ಹೋಮ್ ಫೌಂಡೇಶನ್' ಎಂಬ ಸಂಸ್ಥೆಯು ಜ್ಯೋತಿಯ ನೆರವಿಗೆ ಧಾವಿಸುತ್ತದೆ. ಆಕೆಗೆ ಶಿಕ್ಷಣವನ್ನು ಕೊಡಿಸುತ್ತಾರೆ. ಜ್ಯೋತಿ 10ನೇ ತರಗತಿ ಪರೀಕ್ಷೆಯನ್ನು ಬರೆದು ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣಳು ಆಗುತ್ತಾಳೆ. ಇದಾದ ಬಳಿಕ ಬಿಹಾರದಲ್ಲಿ ಕಚೇರಿಯೊಂದರಲ್ಲಿ ಕೆಲಸಕ್ಕೆ ಸೇರುವ ಜ್ಯೋತಿ, ಉದ್ಯೋಗದ ಜತೆಗೆ ಮಾರ್ಕೆಟಿಂಗ್ ಕೋರ್ಸ್ ಸಹ ಮಾಡುತ್ತಾಳೆ.
ಮಾರ್ಕೆಟಿಂಗ್ ಕೋರ್ಸ್ ಪೂರ್ಣಗೊಳಿಸಿದ ಬಳಿಕ ಸೇಲ್ಸ್ ಗರ್ಲ್ ಆಗಿ ಕೆಲಸ ಆರಂಭಿಸುತ್ತಾಳೆ. ಹೀಗೆ ತನ್ನ ಕೆಲಸದಲ್ಲಿ ಶ್ರದ್ಧೆ, ಪ್ರಮಾಣಿಕತೆ ಹಾಗೂ ಶ್ರಮವನ್ನು ಹಾಕುತ್ತಾಳೆ. ಸದ್ಯ ಜ್ಯೋತಿಗೆ 19 ವರ್ಷ. ಈಕೆಯ ಪ್ರತಿಭೆಯನ್ನು ನೋಡಿ ಲೆಮನ್ ಕೆಫೆ ಎಂಬ ರೆಸ್ಟೊರೆಂಟ್ ಮ್ಯಾನೇಜರ್ ಕೆಲಸಕ್ಕೆ ಆಫರ್ ಮಾಡಿದೆ. ತಾನು ದುಡಿದ ಹಣದಲ್ಲಿ ಅರ್ಧದಷ್ಟನ್ನು ರ್ಯಾಂಬೋ ಹೋಮ್ ಫೌಂಡೇಶನ್ಗೆ ಜ್ಯೋತಿ ನೀಡುತ್ತಿದ್ದಾಳೆ.
ಪಟನಾ ಜಂಕ್ಷನ್ನಲ್ಲಿ ಭಿಕ್ಷುಕಿಯಾಗಿ ಜೀವನ ಆರಂಭಿಸಿದ ಜ್ಯೋತಿ ಬದುಕಿನಲ್ಲಿ ಎದುರಾದ ತಿರುವುಗಳು ಇಂದು ಆಕೆಯನ್ನು ಒಂದು ಒಳ್ಳೆಯ ಸ್ಥಾನದಲ್ಲಿ ಕೂರಿಸಿದೆ. ಜೀವನದಲ್ಲಿ ಎಂದಿಗೂ ಭರವಸೆ ಕಳೆದುಕೊಳ್ಳಬಾರದು ಮತ್ತು ಅವಕಾಶಗಳನ್ನು ಎಂದಿಗೂ ತಪ್ಪಿಸಿಕೊಳ್ಳಬಾರದು ಎಂಬುದಕ್ಕೆ ಜ್ಯೋತಿ ತಾಜಾ ಉದಾಹರಣೆಯಾಗಿದ್ದಾರೆ.