ನವದೆಹಲಿ: 'ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಯುಇಟಿ) ಎಲ್ಲ ಪರೀಕ್ಷಾ ಮಂಡಳಿಗಳ ಅಭ್ಯರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸಲಿದೆ' ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.
ಪರೀಕ್ಷೆಯನ್ನು ನಡೆಸುವ ಹೊಣೆ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಮುಂದಿನ ಶೈಕ್ಷಣಿಕ ಸಾಲಿನಿಂದ ವಾರ್ಷಿಕ ಎರಡು ಬಾರಿ ಸಿಯುಇಟಿ ನಡೆಸುವುದನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದರು.
ಸಿಯುಇಟಿಯಿಂದ ಪರೀಕ್ಷಾ ಮಂಡಳಿಗಳ ಪರೀಕ್ಷೆಗಳು ಅಪ್ರಸ್ತುತವೂ ಆಗುವುದಿಲ್ಲ ಅಥವಾ ಇದು ಕೋಚಿಂಗ್ ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದೂ ಇಲ್ಲ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಪ್ರತಿಪಾದಿಸಿದರು.
ಸಿಯುಇಟಿ ಅಂಕಗಳು ಭವಿಷ್ಯದಲ್ಲಿ ಕೇವಲ ಕೇಂದ್ರೀಯ ವಿ.ವಿ.ಗಳ ಪದವಿ ಕೋರ್ಸ್‌ಗಳಿಗೆ ಪ್ರವೇಶ ನೀಡುವುದಕ್ಕಷ್ಟೇ ಮಾನದಂಡ ಆಗುವುದಿಲ್ಲ. ಈ ಅಂಕಗಳನ್ನೇ ಪರಿಗಣಿಸಲು ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳೂ ಆಸಕ್ತಿ ತೋರಿವೆ ಎಂದರು.
ಟಾಟಾ ಸಮಾಜ ವಿಜ್ಞಾನ ಸಂಸ್ಥೆ (ಟಿಐಎಸ್‌ಎಸ್), ಜಾಮಿಯಾ ಹಮ್‌ದರ್ದ್ ಸೇರಿದಂತೆ ಎಂಟು ಡೀಮ್ಡ್ ವಿಶ್ವವಿದ್ಯಾಲಯಗಳೂ ತನ್ನ ಪದವಿ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ಸಿಯುಇಟಿ ಅಂಕ ಪರಿಗಣಿಸಲು ಆಸಕ್ತಿ ತೋರಿವೆ. ಯುಜಿಸಿಯಿಂದ ನಿರ್ವಹಣಾ ಅನುದಾನ ಪಡೆಯುವ ಈ ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ನಿರ್ದೇಶಕರ ಜೊತೆಗೆ ನಾನು ಚರ್ಚಿಸಿದ್ದೇನೆ ಎಂದರು.
ಸಿಯುಇಟಿ ಪರೀಕ್ಷೆಯು ಕೋಚಿಂಗ್ ಸಂಸ್ಕೃತಿಗೆ ಉತ್ತೇಜನ ನೀಡಲಿದೆಯೇ ಎಂಬ ಪ್ರಶ್ನೆಗೆ, ಈ ಪರೀಕ್ಷೆಗೆ ಕೋಚಿಂಗ್ ಅಗತ್ಯವಿಲ್ಲ. 12ನೇ ತರಗತಿ ಪಠ್ಯವನ್ನು ಆಧರಿಸಿಯೇ ಪರೀಕ್ಷೆ ನಡೆಯಲಿದೆ. ಅನೇಕ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯು 11ನೇ ತರಗತಿ ಪಠ್ಯವನ್ನು ಒಳಗೊಂಡಿರಲಿದೆ ಎಂಬ ಆತಂಕದಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಅಂತಹ ಆತಂಕ ಅನಗತ್ಯ ಎಂದು ಹೇಳಿದರು.
ಸುಮಾರು 45 ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ಇದೇ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಪ್ರವೇಶಕ್ಕೆ ಇನ್ನು 12ನೇ ತರಗತಿ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಈಚೆಗೆ ಪ್ರಕಟಿಸಲಾಗಿತ್ತು.
ಇದೇ ಮೊದಲ ಬಾರಿಗೆ ನಡೆಯಲಿರುವ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಏಪ್ರಿಲ್ 2ರಿಂದ ಆರಂಭವಾಗಲಿದೆ.