ವಾರ್ಸಾ: ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಉಕ್ರೇನ್ ಆಕ್ರಮಣದ ಮೂಲಕ ನ್ಯಾಟೋ ಪಾಶ್ಚಿಮಾತ್ಯ ರಕ್ಷಣಾ ಒಕ್ಕೂಟವನ್ನು ಪ್ರಬಲಗೊಳಿಸಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ಹೇಳಿದ್ದಾರೆ.
ವಾರ್ಸಾದಲ್ಲಿ ಪೊಲೆಂಡ್ ಅಧ್ಯಕ್ಷ ಆಂಡ್ರಜ್ ದುಡಾ ಅವರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲಾ ಹ್ಯಾರಿಸ್, ಉಕ್ರೇನ್ ವಿಚಾರದಲ್ಲಿ ಪುಟಿನ್ ತೆಗೆದುಕೊಂಡ ನಿರ್ಧಾರದಿಂದ ರಷ್ಯಾ ದುರ್ಬಲವಾಗಿದ್ದು, ನ್ಯಾಟೋ ಮಿಲಿಟರಿ ಕೂಟ ಸದೃಢವಾಗಿದೆ. ಇದು ನಮಗೆ ಸ್ಪಷ್ಟವಾಗಿದೆ ಎಂದರು.
ಉಕ್ರೇನ್ ರಕ್ಷಿಸಬೇಕಾಗಿದೆ ಎಂದು ಪೊಲೆಂಡ್ ಅಧ್ಯಕ್ಷ ಡುಡಾ ಹೇಳಿದರು. ರಷ್ಯಾದ ವಿರುದ್ಧ ಹೆಚ್ಚುವರಿ ನಿರ್ಬಂಧ ವಿಧಿಸಬೇಕಾಗಿದೆ. ಇಂತಹ ಮಿಲಿಟರಿ ಚಟುವಟಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು.
ಉಕ್ರೇನ್ ನ ಮಾರಿಯುಪೋಲ್ ನಲ್ಲಿನ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾದ ಬಾಂಬ್ ದಾಳಿಯನ್ನು ಉಭಯ ನಾಯಕರು ಖಂಡಿಸಿದರು. ಈ ಹಿಂಸಾಚಾರದ ಕೃತ್ಯ ಅನ್ಯಾಯಯುತವಾದದ್ದು, ಊಹಿಕೊಳ್ಳಲಾಗದಂತಹ ರೀತಿಯಲ್ಲಿ ದೌರ್ಜನ್ಯಗಳು ಉಕ್ರೇನ್ ನಲ್ಲಿ ನಡೆಯುತ್ತಿರುವುದನ್ನು ನಾವು ನೋಡುತ್ತಿರುವುದಾಗಿ ಕಮಲಾ ಹ್ಯಾರಿಸ್ ತಿಳಿಸಿದರು.