ಇಂದೋರ್(ಮ.ಪ್ರ),ಮಾ.27: ಇಲ್ಲಿಯ ನ್ಯಾಯಾಲಯವು 2011ರಲ್ಲಿ ಪ್ರತಿಭಟನಾನಿರತ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಕಾರ್ಯಕರ್ತರೊಂದಿಗೆ ಘರ್ಷಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಸೇರಿದಂತೆ ಆರು ಜನರಿಗೆ ಒಂದು ವರ್ಷ ಕಠಿಣ ಜೈಲುಶಿಕ್ಷೆ ಮತ್ತು ತಲಾ 5,000 ರೂ.ದಂಡವನ್ನು ವಿಧಿಸಿದೆ.
ಶುಕ್ರವಾರ ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಲಯವು ಬಳಿಕ ಎಲ್ಲರಿಗೂ ಜಾಮೀನು ಮಂಜೂರು ಮಾಡಿದೆ. ಸಿಂಗ್ ಜೊತೆಗೆ ಉಜ್ಜೈನ್ ನ ಮಾಜಿ ಸಂಸದ ಪ್ರೇಮಚಂದ ಗುಡ್ಡು, ಅನಂತ ನಾರಾಯಣ, ಜೈಸಿಂಗ್ ದರ್ಬಾರ್, ಅಸ್ಲಂ ಲಾಲಾ ಮತ್ತು ದಿಲೀಪ್ ಚೌಧರಿ ಅವರು ಶಿಕ್ಷೆಗೆ ಗುರಿಯಾಗಿದ್ದಾರೆ. ನ್ಯಾಯಾಲಯವು ಇತರ ಆರೋಪಿಗಳಾದ ಕಾಂಗ್ರೆಸ್ ಶಾಸಕ ಮಹೇಶ ಪರಮಾರ್, ಮುಕೇಶ ಭಾಟಿ ಮತ್ತು ಹೇಮಂತ ಚೌಹಾಣ ಅವರನ್ನು ಸಾಕ್ಷಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿದೆ.
ಜಾಮೀನು ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್,ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸುವುದಾಗಿ ತಿಳಿಸಿದರು. ಮೂಲ ಎಫ್‌ಐಆರ್ನಲ್ಲಿ ತನ್ನ ಹೆಸರನ್ನು ಆರೋಪಿಯೆಂದು ಸಹ ಉಲ್ಲೇಖಿಸಿರಲಿಲ್ಲ. ನಂತರ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ತನ್ನ ಹೆಸರನ್ನು ಸೇರಿಸಿದ್ದರು ಎಂದು ಅವರು ಆರೋಪಿಸಿದರು.
ಸಿಂಗ್ ಮತ್ತು ಗುಡ್ಡು ಬಿಜೆವೈಎಂ ಕಾರ್ಯಕರ್ತ ರಿತೇಶ ಖಾಬಿಯಾನನ್ನು ಥಳಿಸುವಂತೆ ಇತರರನ್ನು ಪ್ರಚೋದಿಸಿದ್ದರು ಎಂದು ಆರೋಪಿಸಲಾಗಿತ್ತು.