ನವದೆಹಲಿ: ಆಕಸ್ಮಿಕವಾಗಿ ಉಡಾವಣೆಯಾದ ಶಸ್ತ್ರಾಸ್ತ್ರರಹಿತ ಸೂಪರ್‌ಸಾನಿಕ್ ಕ್ಷಿಪಣಿ ಪಾಕಿಸ್ತಾನದ ಭೂಪ್ರದೇಶದ ಒಳಗೆ ಬಿದ್ದಿದ್ದಕ್ಕೆ ಭಾರತ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ದಿನನಿತ್ಯದ ನಿರ್ವಹಣೆಯ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆಯಾಗಿದೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ಹೇಳಿದೆ.
ಮಾರ್ಚ್ 9 ರಂದು ಭಾರತದ ಕ್ಷಿಪಣಿಯು ಆಕಸ್ಮಿಕವಾಗಿ ಪಾಕಿಸ್ತಾನದ ಪ್ರದೇಶದಲ್ಲಿ ಇಳಿಯಿತು ಮತ್ತು "ಈ ಘಟನೆಯು ತೀವ್ರ ವಿಷಾದನೀಯವಾಗಿದೆ" ಎಂದು ಸಚಿವಾಲಯ ಹೇಳಿದೆ.
ಭಾರತದಿಂದ ಉಡಾವಣೆಗೊಂಡ ಅತಿವೇಗದ ಕ್ಷಿಪಣಿಯೂ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿ ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ಬಳಿ ಬಿದ್ದಿದೆ ಎಂದು ಪಾಕಿಸ್ತಾನ ಸೇನೆ ಗುರುವಾರ ತಿಳಿಸಿತ್ತು.
ಭಾರತ ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಉನ್ನತ ಮಟ್ಟದ ವಿಚಾರಣೆಗೆ ಆದೇಶಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
"ಮಾರ್ಚ್ 9 ರಂದು, ದಿನನಿತ್ಯದ ನಿರ್ವಹಣೆಯ ಸಂದರ್ಭದಲ್ಲಿ ಉಂಟಾದ ತಾಂತ್ರಿಕ ದೋಷವು ಕ್ಷಿಪಣಿಯ ಗುಂಡಿನ ದಾಳಿಗೆ ಕಾರಣವಾಯಿತು" ಎಂದು ಅದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಸಿರ್ಸಾದಿಂದ ಉಡಾವಣೆಯಾದ ಕ್ಷಿಪಣಿಯು ಬುಧವಾರ ಸಂಜೆ ಪಾಕಿಸ್ತಾನದ ಗಡಿಯೊಳಗೆ 124 ಕಿಮೀ ದೂರ ಬಂದಿಳಿದಿದೆ ಎಂದು ಪಾಕಿಸ್ತಾನ ಹೇಳಿದೆ. ಅಲ್ಲದೆ ಕ್ಷಿಪಣಿಯು 40,000 ಅಡಿ ಎತ್ತರದಲ್ಲಿ ಹಾರಾಟ ನಡೆಸಿತ್ತು. ಇದರಿಂದ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ವಾಯು ಪ್ರದೇಶದಲ್ಲಿನ ಪ್ರಯಾಣಿಕ ವಿಮಾನಗಳಿಗೆ ಅಪಾಯ ತಂದೊಡ್ಡಿತ್ತು ಎಂದು ಹೇಳಿದೆ.