ನವದೆಹಲಿ: ಕ್ರಿಮಿನಲ್ ಕಾನೂನುಗಳಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶದೊಂದಿಗೆ ಕಾನೂನು ತಿದ್ದುಪಡಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಬುಧವಾರ ತಿಳಿಸಿದೆ. ಇಂಡಿಯನ್ ಪೀನಲ್ ಕೋಡ್ ಮತ್ತು ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ಗಳ ಪರಿಷ್ಕರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ.
ಗೃಹ ಖಾತೆ ಸಂಸದೀಯ ಸ್ಥಾಯಿ ಸಮಿತಿ ತನ್ನ 146ನೇ ಶಿಫಾರಸು ವರದಿಯಲ್ಲಿ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ ಸಮಗ್ರ ಪರಾಮರ್ಶೆಯ ಅಗತ್ಯವಿದೆ ಎಂದು ಹೇಳಿತ್ತು. ಅದನ್ನು ಸರ್ಕಾರ ಪರಿಗಣಿಸಿದೆ ಎಂದು ಮಿಶ್ರಾ ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ ಸುಧಾರಣೆ: ಸಂವಿಧಾನದ ಅನುಚ್ಛೇದ 370 ರದ್ದುಗೊಳಿಸಿದ ನಂತರದಲ್ಲಿ ಜಮ್ಮು -ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಕಡಿಮೆ ಆಗಿವೆ ಮತ್ತು ಹೂಡಿಕೆ ಮಾಡುವಂತಹ ಪರಿಸರ ನಿರ್ವಣವಾಗಿದೆ. 890 ಕೇಂದ್ರ ಕಾನೂನುಗಳು ಅಲ್ಲಿ ಈಗ ಅನ್ವಯವಾಗುತ್ತಿದೆ. 250 ತಾರತಮ್ಯದ ಮತ್ತು ಅಸಮರ್ಥನೀಯವಾದ ರಾಜ್ಯದ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. 137 ಕಾನೂನು ಗಳನ್ನು ಪರಿಷ್ಕರಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜಮ್ಮು -ಕಾಶ್ಮೀರ ಬಜೆಟ್ ಕುರಿತ ಚರ್ಚೆಯಲ್ಲಿ ತಿಳಿಸಿದರು.
ಉಪಜಾತಿ ಮರುವರ್ಗೀಕರಣಕ್ಕೆ ಕರ್ನಾಟಕ ಸೇರಿ 7 ರಾಜ್ಯಗಳ ಒಲವು: ಉಪಜಾತಿಗಳ ಮರು ವರ್ಗೀಕರಣಕ್ಕೆ 20 ರಾಜ್ಯಗಳ ಪೈಕಿ ಏಳು ರಾಜ್ಯಗಳು ಒಲವು ತೋರಿವೆ. ಕರ್ನಾಟಕ, ಆಂಧ್ರಪ್ರದೇಶ, ಛತ್ತೀಸ್ಗಢ, ಜಾರ್ಖಂಡ್, ಹರಿಯಾಣ, ತೆಲಂಗಾಣ ಮತ್ತು ಪಂಜಾಬ್ ಒಲವು ತೋರಿವೆ ಎಂದು ರಾಜ್ಯಸಭೆಗೆ ಸರ್ಕಾರ ತಿಳಿಸಿದೆ.
ಎಂಪಿಲ್ಯಾಡ್ ನಿಧಿ ಏರಿಕೆ ಇಲ್ಲ: ಮೆಂಬರ್ ಆಫ್ ಪಾರ್ಲಿಮೆಂಟ್ ಲೋಕಲ್ ಏರಿಯಾ ಡೆವಲಪ್ವೆುಂಟ್ (ಎಂಪಿಲ್ಯಾಡ್) ಸ್ಕೀಮ್ ವಾರ್ಷಿಕ ನಿಧಿಯನ್ನು ಏರಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಎದುರು ಇಲ್ಲ ಎಂದು ಸರ್ಕಾರ ಸಂಸತ್ಗೆ ತಿಳಿಸಿದೆ.
ಸಂಸತ್ಗೆ ಸರ್ಕಾರ ಮಾಹಿತಿ
- ಭ್ರಷ್ಟಾಚಾರಕ್ಕೆ ತಡೆಯೊಡ್ಡುವ ಲೋಕಪಾಲ ಕಾಯ್ದೆ 2013ಕ್ಕೆ ತಿದ್ದುಪಡಿ ಮಾಡಬೇಕಾದ ಸನ್ನಿವೇಶ ಇದುವರೆಗೆ ಎದುರಾಗಿಲ್ಲ.
- ಭಾರತೀಯ ರೈಲ್ವೆಯ ಜತೆಗೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ.
- ಭಾರತೀಯ ರೈಲ್ವೆಯಲ್ಲಿ 1.49 ಲಕ್ಷ ಆರಂಭಿಕ ಹಂತದ ಉದ್ಯೋಗಗಳು ಖಾಲಿ ಇವೆ. ಉತ್ತರ ರೈಲ್ವೆನಲ್ಲಿ 19,183, ದಕ್ಷಿಣ ರೈಲ್ವೆನಲ್ಲಿ 17,022 ಹುದ್ದೆಗಳು ಖಾಲಿ ಇವೆ.
- ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಇಂಟರ್ನೆಟ್ ಬಳಕೆದಾರರ ಸುರಕ್ಷತೆ ಖಾತರಿಪಡಿಸುವುದಕ್ಕಾಗಿ ಇದುವರೆಗೆ 320 ಮೊಬೈಲ್ ಆಪ್ಗಳನ್ನು ಬ್ಲಾಕ್ ಮಾಡಲಾಗಿದೆ.
- ಭಾರತವು 2020-21ನೇ ಸಾಲಿನಲ್ಲಿ 651.24 ಟನ್ ಚಿನ್ನವನ್ನು ಆಮದುಮಾಡಿಕೊಂಡಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 719.94 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು.
- ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 48 ರಾಷ್ಟ್ರಗಳಲ್ಲಿ ಭಾರತದ ರಾಯಭಾರ ಕಚೇರಿ ಸ್ಥಾಪಿಸಲು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಹಂತ ಹಂತವಾಗಿ ಈ ಕೆಲಸ ನಡೆಯಲಿದೆ.
- ಕೋವಿಡ್ ಕಾರಣಕ್ಕೆ ಶಾಲೆಗಳಲ್ಲಿ ಸ್ಥಗಿತಗೊಳಿಸಿರುವಂತಹ ಬಿಸಿಯೂಟ ವ್ಯವಸ್ಥೆಯನ್ನು ಮರು ಆರಂಭಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನೋತ್ತರ ಅವಧಿಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.