ಕುಂಬಳೆ: ಸೀತಾಂಗೋಳಿ ಸಮೀಪದ ಪರ್ಣೆಯ ವಾಣಿಯ ಅ|ಥವಾ ಗಾಣಿಗ ಸಮುದಾಯದ ಕಾರಣಿಕ ಪ್ರಸಿದ್ದ ಆರಾಧನಾಲಯವಾದ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಜರಗುವ ವಾರ್ಷಿಕ ಪೂರಂ ಸಾಮೂಹಿಕ ವಿವಾಹ ಕಾರ್ಯಕ್ರಮ ಶುಕ್ರವಾರ ನೆರವೇರಿತು.
ವಾಣಿಯ ಅಥವಾ ಗಾಣಿಗ ಸಮುದಾಯದ ಪ್ರಸಿದ್ದ ಆರಾಧನಾಲಯವಾದ ಇಲ್ಲಿ ವಾರ್ಷಿಕವಾಗಿ ಎರಡು ಬಾರಿ ಸಾಮೂಹಿಕ ವಿವಾಹ ನಡೆಯುತ್ತಿದ್ದು, ಶುಕ್ರವಾರ 19 ಜೋಡಿಗಳು ಹಸೆಮಣೆಗೇರಿದರು. ಕಾಸರಗೋಡು ಮಾತ್ರವಲ್ಲದೆ ದಕ್ಷಿಣ ಕನ್ನಡ, ಕೊಡಗು, ಕಣ್ಣೂರು ಜಿಲ್ಲೆಗಳ ನೂರಾರು ಮಂದಿ ಇಲ್ಲಿ ಒಟ್ಟು ಸೇರುವುದು ವಿಶೇಷವಾಗಿದ್ದು, ಗಾಣಿಗ ಸಮುದಾಯದ ಪ್ರಮುಖ ಕೇಂದ್ರವಾಗಿದೆ.
ಸರಳ ಸಾಮೂಹಿಕ ವಿವಾಹದಲ್ಲಿ ಸಂಸಾರದ ನೌಕೆಯನ್ನೇರುತ್ತಿರುವವರು ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಅಮ್ಮನನ್ನು ಕುಲದೇವರನ್ನಾಗಿ ಆರಾಧಿಸುತ್ತಿರುವ ಗಾಣಿಗ ಸಮುದಾಯದವರು. ಮಲಯಾಳಂನಲ್ಲಿ 'ಬಾಣಿಯ ಅಥವಾ ವಾಣಿಯನ್', ಕನ್ನಡದಲ್ಲಿ 'ಗಾಣಿಗ ಅಥವಾ ಪಾಟಾಳಿ' ಎಂದೆಲ್ಲಾ ಕರೆಯಲ್ಪಡುವ ಈ ಸಮುದಾಯದವರ ಹೆಸರೇ ಸೂಚಿಸುವಂತೆ ಗಾಣದ ಮೂಲಕ ಎಣ್ಣೆ ತಯಾರಿಸುವುದು ಇವರ ಕುಲಕಸುಬು. ಆದರೆ ಇವರ ಪೂರ್ವಜರು ಕೇವಲ ದೀಪವನ್ನು ಬೆಳಗಿಸುವುದಕ್ಕಷ್ಟೇ ಎಣ್ಣೆಯನ್ನು ತಯಾರಿಸಿದ್ದಲ್ಲ. ಬದಲಾಗಿ, ಸುಲಭ ಸೂತ್ರವೊಂದರ ಮೂಲಕ ತಮ್ಮ ಸಮುದಾಯದ ಪ್ರತಿಯೊಬ್ಬ ಗಂಡು ಹೆಣ್ಣಿನ ದಾಂಪತ್ಯದ ಬದುಕನ್ನು ಬೆಳಗಿಸುವುದಕ್ಕೂ ಎಣ್ಣೆಯನ್ನು ಎರೆದವರಿವರು. ಆ ಸುಲಭ ಸೂತ್ರವೇ 'ವರದಕ್ಷಿಣೆ ರಹಿತ ಕಡ್ಡಾಯ ಸಾಮೂಹಿಕ ವಿವಾಹ!'
"ಇಲ್ಲಿನ ಸಾಮೂಹಿಕ ವಿವಾಹದಲ್ಲಿ ಏನಿದೆ ಅಂತಹ ವೈಶಿಷ್ಟ್ಯತೆ" :-
ಸರಳ ವಿವಾಹ, ಸಾಮೂಹಿಕ ವಿವಾಹಗಳು ಹಲವಾರು ಕಡೆಗಳಲ್ಲಿ ಪ್ರಚಲಿತದಲ್ಲಿರುವಾಗ ಇವರ ಸಮುದಾಯದ ಮದುವೆಯನ್ನು ಒತ್ತಿ ಹೇಳುವ ಅವಶ್ಯಕತೆಯೇನಿದೆ? ಎಂದು ನೀವು ಭಾವಿಸಬಹುದು. ಕೆಲವರಿಗೆ ಸಾಮೂಹಿಕ ವಿವಾಹವೆಂದರೆ ಒಂದು ತರಹದ ಅಸಡ್ಡೆ ಮತ್ತು ಕೀಳರಿಮೆ. ಮತ್ತೆ ಕೆಲವರಿಗೆ ತಮ್ಮ ಪ್ರತಿಷ್ಟೆಗೆ ಧಕ್ಕೆಯಾಗಬಹುದೇನೋ ಅನ್ನುವ ಅಳುಕು. ಆದರೆ ಈ ಗಾಣಿಗ ಸಮುದಾಯದ ವ್ಯಕ್ತಿ ಎಷ್ಟೇ ಶ್ರೀಮಂತನಿರಲಿ ಅಥವಾ ಬಡವನಿರಲಿ, ಯಾವುದೇ ರೀತಿಯ ಭೇದಭಾವವಿಲ್ಲದೆ ಎಲ್ಲರೂ ಕೂಡಾ ಈ ಕ್ಷೇತ್ರದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿಯೇ ಸರಳವಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಡಬೇಕೇ ಹೊರತು ಬೇರೆಲ್ಲೂ ವಿವಾಹವಾಗುವಂತಿಲ್ಲ! ಇದು ಕೇವಲ ಅವರವರ ಆಯ್ಕೆಗೆ ಬಿಟ್ಟ ವಿಚಾರವೂ ಅಲ್ಲ, ಬದಲಾಗಿ ಹಲವಾರು ತಲೆಮಾರುಗಳ ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಕಟ್ಟುನಿಟ್ಟಿನ ನಿಯಮ. ಒಂದು ವೇಳೆ ಈ ಕಟ್ಟುಪಾಡನ್ನು ಮುರಿದು ಬೇರೆಡೆ ಮದುವೆಯಾದರೆ ಕುಲದೇವತೆಯಾದ ತಾಯಿ ಭಗವತಿಯ ಶಾಪ ತಟ್ಟುತ್ತದೆ ಅನ್ನುವ ಬಲವಾದ ನಂಬಿಕೆಯೂ ಇವರಲ್ಲಿದೆ. ಉಳಿದ ಸಮುದಾಯದಂತೆ ಮದುವೆ ನಿಶ್ಚಿತಾರ್ಥವಾದ ಕೂಡಲೇ ಮದುವೆಯ ಮುಹೂರ್ತಕ್ಕಾಗಿ ತಡಕಾಡುವುದು, ಅದ್ಧೂರಿಯ ಕಲ್ಯಾಣ ಮಂಟಪ ಕಾದಿರಿಸಲು ಅತ್ತಿತ್ತ ಅಲೆದಾಡುವುದು, ತರಹೇವಾರಿ ಭಕ್ಷ್ಯ ಭೋಜನಗಳ ತಯಾರಿಗಾಗಿ ಪಾಕಶಾಸ್ತ್ರಜ್ಞರನ್ನು ಹುಡುಕಾಡುವುದು, ಇಂತಹ ಯಾವುದೇ ತಲೆಬಿಸಿ ಇವರಿಗಿಲ್ಲ. ನಿಶ್ಚಿತಾರ್ಥವಾದ ಬಳಿಕ ಪೆರ್ಣೆ ಕ್ಷೇತ್ರದಲ್ಲಿ ವಧೂವರರ ಹೆಸರು ನೊಂದಾಯಿಸಿ ವರನ ಕಡೆಯಿಂದ 1000 ರೂ. ವಧುವಿನ ಕಡೆಯಿಂದ 500 ರೂ. ಕೊಟ್ಟುಬಿಟ್ಟರೆ ಮದುವೆ ತಯಾರಿ ಮುಗಿದಂತೆಯೇ! ಮುಂದಿನದ್ದೆಲ್ಲಾ ಶ್ರೀಕ್ಷೇತ್ರಕ್ಕೇ ಬಿಟ್ಟದ್ದು. ಅವರು ನಿಶ್ಚಯಿಸಿದ ದಿನಾಂಕದಂದು ಸುಂದರವಾಗಿ ಅಲಂಕರಿಸಿಕೊಂಡು ಪೆರ್ಣೆ ಭಗವತಿಯಮ್ಮನ ಮಡಿಲ ಮಂಟಪದಲ್ಲಿ ಕುಳಿತುಬಿಟ್ಟರೆ ಸಾಕು. ಸಾಮೂಹಿಕ ಮದುವೆ ನಡೆದೇ ಬಿಡುತ್ತದೆ.
ಇಷ್ಟು ಮಾತ್ರವಲ್ಲದೆ, ವಧುವಿನ ಜೊತೆಗೆ ವರದಕ್ಷಿಣೆಯ ರೂಪದಲ್ಲಿ ಹಣ, ಹೊನ್ನು, ಕಾರು, ಬಂಗಲೆ ಮುಂತಾದವುಗಳನ್ನು ಕೊಡುವ ಪದ್ಧತಿ ಬಹುತೇಕ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಈ ಕಾಲಘಟ್ಟದಲ್ಲೂ, ವರದಕ್ಷಿಣೆ ಪಡೆಯಲೇಬಾರದೆಂಬ ಇನ್ನೊಂದು ನಿಯಮವನ್ನೂ ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಕೇವಲ ಸರಕಾರಿ ಕಡತಗಳಲ್ಲಿ ಮಾತ್ರವೇ ದಾಖಲಾಗಿರುವ 'ವರದಕ್ಷಿಣೆ ನಿಷೇಧ ಪದ್ಧತಿ'ಯು ತಲೆಮಾರುಗಳ ಹಿಂದಿನಿಂದಲೂ ಯಾರ ಬಲವಂತವೂ ಇಲ್ಲದೆ ಸ್ವಯಂಪ್ರೇರಿತವಾಗಿ ಇಲ್ಲಿ ನಡೆದುಕೊಂಡು ಬರುತ್ತಿರುವುದು ಗಮನಾರ್ಹ ಸಂಗತಿ. ಈ ಸಮುದಾಯ ಹೆಮ್ಮೆ ಪಡುವಂತಹ ಇನ್ನೊಂದು ಬಹುಮುಖ್ಯ ವಿಚಾರವೇನೆಂದರೆ, ಇಡೀ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿ, ಒಂದು ಸಮುದಾಯದ ಎಲ್ಲಾ ಜನರನ್ನು ಆ ಕಟ್ಟುಪಾಡುಗಳಿಗೆ ಒಳಪಡಿಸಿ ಇಡೀ ಸಮಾಜಕ್ಕೇ ಮಾದರಿಯಾದಂತಹ ಕೀರ್ತಿ ಸಲ್ಲುವಂತದ್ದು ಕೂಡಾ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಗಾಣಿಗ ಸಮುದಾಯಕ್ಕೆ!