HEALTH TIPS

ಪಂಚ ರಾಜ್ಯಗಳ ಚುನಾವಣೆ: ರಾಷ್ಟ್ರಪತಿ ಆಯ್ಕೆ ಮೇಲೂ ಫಲಿತಾಂಶದ ಪರಿಣಾಮ

              ನವದೆಹಲಿ: ಉತ್ತರಪ್ರದೇಶ ಸೇರಿದಂತೆ ಈ ವಾರ ಪ್ರಕಟವಾಗಲಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ದೇಶದ ಹೊಸ ರಾಷ್ಟ್ರಪತಿ ಆಯ್ಕೆಗೆ ವರ್ಷಾಂತ್ಯದಲ್ಲಿ ನಡೆಯುವ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ.

            ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ರಾಜ್ಯಗಳಲ್ಲಿ ವಿವಿಧ ಹಂತದಲ್ಲಿ ನಡೆಯುವ ಮತದಾನ ಪ್ರಕ್ರಿಯೆ ಸೋಮವಾರ ಅಂತ್ಯಗೊಳ್ಳಲಿದ್ದು, ಮಾರ್ಚ್‌ 10ರಂದು ಫಲಿತಾಂಶ ಪ್ರಕಟವಾಗಲಿದೆ.

           ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರವಧಿ ಜುಲೈ 24ರಂದು ಅಂತ್ಯವಾಗಲಿದೆ. ಸದ್ಯ, ರಾಷ್ಟ್ರಪತಿಯಾಗಿ ತಾನು ಬಯಸುವ ಅಭ್ಯರ್ಥಿ ಆಯ್ಕೆ ಮಾಡುವ ಸ್ಥಿತಿಯಲ್ಲಿ ಬಿಜೆಪಿ ಇದೆ. ಐದು ರಾಜ್ಯಗಳಲ್ಲಿ, ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪ್ರತಿಕೂಲವಾದ ಫಲಿತಾಂಶ ಹೊರಬಿದ್ದರೆ, ರಾಷ್ಟ್ರಪತಿ ಆಯ್ಕೆ ಕುರಿತ ಲೆಕ್ಕಾಚಾರವು ಏರುಪೇರಾಗಲಿದೆ.

           ರಾಷ್ಟ್ರಪತಿ ಚುನಾವಣೆಗೆ ಪರಿಗಣಿಸುವಂತೆ ಉತ್ತರ ಪ್ರದೇಶದಲ್ಲಿ ಮತಮೌಲ್ಯ ಗರಿಷ್ಠವಾಗಿದ್ದು, ಪ್ರತಿ ಶಾಸಕರ ಮತದ ಮೌಲ್ಯ 208. ಸಿಕ್ಕಿಂನಲ್ಲಿ ಮತದ ಮೌಲ್ಯ ಕನಿಷ್ಠ ಇದ್ದು, ಅಲ್ಲಿ 7 ಆಗಿದೆ. ಉಳಿದಂತೆ ಈಗ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಪ್ರತಿ ಶಾಸಕರ ಮತದ ಮೌಲ್ಯವು ಪಂಜಾಬ್‌ನಲ್ಲಿ 116, ಉತ್ತರಾಖಂಡದಲ್ಲಿ 64, ಗೋವಾದಲ್ಲಿ 20, ಮಣಿಪುರದಲ್ಲಿ 18 ಆಗಿದೆ.

                ವಿಧಾನಸಭೆ ಸದಸ್ಯರ ಸಂಖ್ಯೆಯನ್ನು ಆಧರಿಸಿ ಒಟ್ಟು ಮತ ಮೌಲ್ಯ ಉತ್ತರ ಪ್ರದೇಶದಲ್ಲಿ 83,824, ಪಂಜಾಬ್‌ನಲ್ಲಿ 13,572, ಉತ್ತರಾಖಂಡದಲ್ಲಿ 4,480, ಗೋವಾದಲ್ಲಿ 800 ಮತ್ತು ಮಣಿಪುರದಲ್ಲಿ 1,080 ಆಗಿದೆ. ಈಗ ರಾಷ್ಟ್ರಪತಿ ಆಯ್ಕೆಗೆ ಎನ್‌ಡಿಎ ಬಲವು ಶೇ 50ಕ್ಕಿಂತ ತುಸು ಕಡಿಮೆ ಇದೆ. ಮೈತ್ರಿಗೆ ಹೊರತಾಗಿರುವ, ಸ್ನೇಹಿ ಪಕ್ಷಗಳನ್ನೂ ಎನ್‌ಡಿಎ ಅವಲಂಬಿಸಬೇಕಿದೆ.

           ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ಅವರು ಈಗಾಗಲೇ ವಿರೋಧಪಕ್ಷಗಳ ವಿವಿಧ ಮುಖಂಡರ ಜೊತೆಗೆ ಭೇಟಿ, ಚರ್ಚೆ ಆರಂಭಿಸಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದೇ ಇದರ ಗುರಿ ಎನ್ನಲಾಗಿದೆ. ಇನ್ನೊಂದೆಡೆ, ಎನ್‌ಡಿಎ ಮೈತ್ರಿಕೂಟದಲ್ಲಿ ಒಡಕು ತರಲು ಪ್ರತಿಪಕ್ಷಗಳು ಯತ್ನಿಸುತ್ತಿದ್ದು, ಒಮ್ಮತ ಅಭ್ಯರ್ಥಿಯಾಗಿ ನಿತೀಶ್‌ ಕುಮಾರ್‌ ಹೆಸರು ತೇಲಿಬಿಟ್ಟಿವೆ.

              ಲೋಕಸಭೆ, ರಾಜ್ಯಸಭೆ ಮತ್ತು ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ, ವಿಧಾನಪರಿಷತ್ತಿನ ಸದಸ್ಯರೇ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾರರು. 1971 ಜನಗಣತಿ ಆಧರಿಸಿ ರಾಜ್ಯವಾರು ಪ್ರತಿಶಾಸಕರ ಮತದ ಮೌಲ್ಯ ನಿರ್ಧರಿಸಲಾಗುತ್ತದೆ.

           ವಿವಿಧ ರಾಜ್ಯಗಳ ಅಂಕಿಅಂಶ ಆಧರಿಸಿದರೆ ಸದ್ಯ ಬಿಜೆಪಿ 1,431 ಶಾಸಕರು ಮತ್ತು ಕಾಂಗ್ರೆಸ್ 766 ಶಾಸಕರ ಬಲ ಹೊಂದಿವೆ. ಬಿಜೆಪಿ, ಕಾಂಗ್ರೆಸ್‌ಯೇತರ ಪಕ್ಷಗಳ ಶಾಸಕರ ಬಲ 1,923 ಆಗಿದೆ. ಎನ್‌ಡಿಎ ಲೋಕಸಭೆಯಲ್ಲಿ 334, ರಾಜ್ಯಸಭೆಯಲ್ಲಿ 115 ಸದಸ್ಯರನ್ನು ಹೊಂದಿದೆ. ಬಿಜೆಪಿಯ 9 ನಾಮಕರಣ ಸದಸ್ಯರಿದ್ದು, ಅವರಿಗೆ ಮತದಾನದ ಹಕ್ಕಿಲ್ಲ.

           ಸಂಸದರ ಪ್ರತಿ ಮತದ ಮೌಲ್ಯವನ್ನು 708 ಎಂದು ನಿಗದಿಪಡಿಸಲಾಗಿದೆ. ಈ ಕಾರಣದಿಂದ ಪಂಚರಾಜ್ಯಗಳ ಚುನಾವಣಾ ಫಲಿತಾಂಶವು, ಆಯಾ ರಾಜ್ಯಗಳಲ್ಲಿ ಪಕ್ಷಗಳ ಭವಿಷ್ಯದ ಜೊತೆಗೆ, ರಾಷ್ಟ್ರಪತಿ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries