ಗಾಜಿಯಾಬಾದ್: ಉದ್ಯಮಗಳು, ಉತ್ಪಾದನಾ ಘಟಕಗಳ ಭದ್ರತೆಯ ಹೊಣೆಯನ್ನು ಭವಿಷ್ಯದಲ್ಲಿ ಸಿಐಎಸ್‌ಎಫ್ ಒಂದೇ ಏಕಾಂಗಿಯಾಗಿ ನಿಭಾಯಿಸಲಾಗದು. ಹಂತ ಹಂತವಾಗಿ ಖಾಸಗಿ ಭದ್ರತಾ ಸಂಸ್ಥೆಗಳಿಗೆ ಈ ಹೊಣೆಯನ್ನು ವರ್ಗಾಯಿಸಬಹುದು ಎಂದು ಕೇಂದ್ದಿರ ಗೃಹಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
'ಹೈಬ್ರಿಡ್ ಭದ್ರತಾ ಮಾದರಿ ಅಗತ್ಯ' ಎಂದು ಪ್ರತಿಪಾದಿಸಿರುವ ಶಾ, ಸಿಐಎಸ್‌ಎಫ್ ಮತ್ತು ಖಾಸಗಿ ಭದ್ರತಾ ಸಂಸ್ಥೆಗಳು ಪರಸ್ಪರ ಕೈಜೋಡಿಸುವ ಸಾಧ್ಯತೆಗಳಿವೆ ಎಂದು ಹೇಳಿದರು. ಸಿಐಎಸ್‌ಎಫ್‌ನ 53ನೇ ಸ್ಥಾಪನಾದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಫಲಿತಾಂಶ ಆಧರಿತ ಭದ್ರತಾ ಸಂಸ್ಥೆಯಾಗಿ ಸಿಐಎಸ್‌ಎಫ್ ಅನ್ನು ರೂಪಿಸುವ ಕ್ರಮವಾಗಿ ಮುಂದಿನ 25 ವರ್ಷವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾರ್ಯಸೂಚಿಯನ್ನು ಸಿದ್ಧಪಡಿಸಬೇಕು ಎಂದೂ ಸಿಐಎಸ್‌ಎಫ್ ಮುಖ್ಯಸ್ಥರಿಗೆ ಸಲಹೆ ಮಾಡಿದರು.
ಬಂದರು, ಕಡಲುತೀರದ ಉದ್ಯಮಗಳಿಗೆ ಈಗ ಡ್ರೋನ್ ಬೆದರಿಕೆ ಹೆಚ್ಚುತ್ತಿದೆ. ಹೀಗಾಗಿ, ಭದ್ರತೆಗೆ ಸಂಬಂಧಿಸಿ ಡಿಆರ್‌ಡಿಒ, ಗಡಿಭದ್ರತಾ ಪಡೆಗಳ ಜೊತೆಗೆ ಕೈಜೋಡಿಸಿ, ಇಂತಹ ಬೆದರಿಕೆಗಳನ್ನು ಎದುರಿಸಲು ಕಾರ್ಯತಂತ್ರ ರೂಪಿಸಬೇಕು ಎಂದರು.
ಸಿಐಎಸ್‌ಎಫ್‌ನ ಪ್ರಧಾನ ನಿರ್ದೇಶಕ ಶೀಲ್ ವರ್ಧನ್ ಸಿಂಗ್ ಅವರು, ಸದ್ಯ ಸಿಐಎಸ್‌ಎಫ್ ಬಲ 1.64 ಲಕ್ಷ ಇದೆ. 65 ವಿಮಾನನಿಲ್ದಾಣಗಳು ಹಾಗೂ ಸರ್ಕಾರಿ ಮತ್ತು ಖಾಸಗಿಯ ಪ್ರಮುಖ ಮೂಲಸೌಕರ್ಯಗಳಿಗೆ ಭದ್ರತೆ ಒದಗಿಸುತ್ತಿದೆ ಎಂದರು.