ಪುಣೆ: ಪುಣೆ ಮಹಾನಗರ ಪಾಲಿಕೆ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅನಾವರಣಗೊಳಿಸಿದರು.
ಈ ಪ್ರತಿಮೆಯನ್ನು 1,850 ಕೆಜಿ ಗನ್‌ಮೆಟಲ್‌ನಿಂದ ನಿರ್ಮಿಸಲಾಗಿದೆ ಮತ್ತು ಸುಮಾರು 9.5 ಅಡಿ ಎತ್ತರವಿದೆ. ಪುಣೆ ಮೇಯರ್ ಮುರಳೀಧರ್ ಮೊಹೋಲ್ ಅವರು ಮುನ್ಸಿಪಲ್ ಕಾರ್ಪೊರೇಷನ್ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು ಮತ್ತು ವಿಶೇಷವಾಗಿ ರಚಿಸಲಾದ ಶಿರಸ್ತ್ರಾಣವನ್ನು ನೀಡಿದರು.
ಇದೇ ವೇಳೆ ಪ್ರಧಾನಿ ಮೋದಿ ಮಹಾನಗರ ಪಾಲಿಕೆ ಪ್ರಧಾನ ಕಛೇರಿಯಲ್ಲಿರುವ ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಇದಕ್ಕೂ ಮುನ್ನ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ರಾಜ್ಯ ಸಂಪುಟ ಸಚಿವ ಹಾಗೂ ಶಿವಸೇನೆಯ ಹಿರಿಯ ನಾಯಕ ಸುಭಾಷ್ ದೇಸಾಯಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಲೋಹೆಗಾಂವ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಸ್ವಾಗತಿಸಿದರು.