ನವದೆಹಲಿ: ಪಂಚರಾಜ್ಯ ಚುನಾವಣೆಯ ಫಲಿತಾಂಶ ತಿಳಿಯಲು ದೇಶವೇ ಕಾತರವಾಗಿದೆ. ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಗುರುವಾರ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶದ ಕಾವು ಏರುತ್ತಿದೆ. ರಾಜಕೀಯ ಪಕ್ಷಗಳು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿವೆ.
ವಾರಣಾಸಿಯಲ್ಲಿ ಇವಿಎಂ, ವಿದ್ಯುನ್ಮಾನ ಮತಯಂತ್ರಗಳನ್ನು ಅನಧಿಕೃತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂಬ ಸಮಾಜವಾದಿ ಪಕ್ಷದ ಆರೋಪ ವಿವಾದಕ್ಕೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಚುನಾವಣಾ ಆಯೋಗ ಬದಲಾಯಿಸಿತ್ತು.
ಈ ಬಾರಿಯ ಚುನಾವಣೆ ರಾಜಕೀಯ ಪಕ್ಷಗಳಿಗೆ ಮುಖ್ಯವಾಗಿರುವುದರಿಂದ ಪಕ್ಷಗಳು ಹಿರಿಯ ನಾಯಕರನ್ನು ರಾಜ್ಯಗಳಿಗೆ ಕಳುಹಿಸಿವೆ. ಐದು ರಾಜ್ಯಗಳಲ್ಲಿ ಸುಮಾರು 1,200 ಸಭಾಂಗಣಗಳನ್ನು ಮತ ಎಣಿಕೆ ಕೇಂದ್ರಗಳನ್ನಾಗಿ ಮಾರ್ಪಾಡು ಮಾಡಲಾಗಿದೆ.
50,000ಕ್ಕೂ ಹೆಚ್ಚು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ 8 ಗಂಟೆಗೆ ಮತಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.