ಬದಿಯಡ್ಕ: ಮನಸ್ಸನ್ನು ಅರಳಿಸುವ ಸಾಹಿತ್ಯ ಕೃತಿಗಳಿಂದ ಭೌದ್ದಿಕ ವಿಕಾಸಕ್ಕೆ ಸಾಧ್ಯವಿದೆ. ಚಿಂತೆಯಿಂದ ದೂರವಾಗಿ ಚಿಂತನೆಗೆ ಹಚ್ಚುವ ಅಕ್ಷರ ಕಲೆ ಸುದೃ|ಢ ಸಮಾಜವನ್ನು ನಿರ್ಮಿಸಬಲ್ಲದು. ಈಗಾಗಲೇ ನಾಲ್ಕು ಸಂಕಲನಗಳನ್ನು ಕೊಟ್ಟಿರುವ ಪ್ರಸಿದ್ಧ ಹಾಸ್ಯ ಕವಿ, ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಅವರ ಇನ್ನಷ್ಟು ಕೃತಿಗಳು ಬರಲಿ ಎಂದು ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ಎಡನೀರು ಮಠದ ಸಭಾಂಗಣದಲ್ಲಿ ಪ್ರಸಿದ್ಧ ವ್ಯಂಗ್ಯ ಚಿತ್ರ ಕಲಾವಿದ, ಸಾಹಿತಿ ವೆಂಕಟ್ ಭಟ್ ಎಡನೀರು ಅವರ ಹನಿಗವನ ಸಂಕಲನ 302 ಎಳ್ಳುಂಡೆ ಕೃತಿ ಬಿಡುಗಡೆಗೊಳಿಸಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿಯವರು ಪೂರ್ವಾಶ್ರಮದಲ್ಲಿ ರಚಿಸಿದ ಕವಿತೆಯೊಂದನ್ನು ವಾಚಿಸಿದರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಹರಿಕೃಷ್ಣ ಭರಣ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕೃತಿ ಪರಿಚಯ ಮಾಡಿದರು. ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ವಿಶ್ರಾಂತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ, ಮಣಿಪಾಲ ಆಯುರ್ವೇದ ಕಾಲೇಜು ಪ್ರಾಧ್ಯಾಪಕ ಡಾ.ಸುರೇಶ್ ನೆಗಳಗುಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸೂರ್ಯ ಭಟ್ ಎಡನೀರು ಸ್ವಾಗತಿಸಿ, ಡಾರಾಧಾಕೃಷ್ಣ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು. ವೆಂಕಟ್ ಭಟ್ ಎಡನೀರು ವಂದಿಸಿದರು.