ಕೊಚ್ಚಿ: ದೇಶಾದ್ಯಂತ ಖಾಸಗೀಕರಣ ಜಾರಿಯಾಗುತ್ತಿರುವುದರಿಂದ ಕೇರಳ ಮಾತ್ರ ಖಾಸಗಿ ಹೂಡಿಕೆಯನ್ನು ಎದುರಿಸಲು ಸಾಧ್ಯವಿಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹೇಳಿದ್ದಾರೆ.
ಕೇವಲ ಸಾಮಾಜಿಕ ನಿಯಂತ್ರಣದೊಂದಿಗೆ ಉನ್ನತ ಶಿಕ್ಷಣ ಸೇರಿದಂತೆ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವುದು ಪಕ್ಷದ ಧೋರಣೆಯಾಗಿದೆ ಎಂದು ಯೆಚೂರಿ ಹೇಳಿದರು. ಖಾಸಗೀಕರಣ ವಿಚಾರವಾಗಿ ಕೇರಳದ ನಿಲುವಿನ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಯೆಚೂರಿ ಹೇಳಿಕೆ ನೀಡಿದ್ದಾರೆ.
ಶಿಕ್ಷಣದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡುವಾಗ ಪಠ್ಯಕ್ರಮ, ಕೋರ್ಸ್‍ಗಳ ವಿಷಯ, ಮೀಸಲಾತಿ ನೀತಿಗಳು ಮತ್ತು ಸಿಬ್ಬಂದಿ ವೇತನಗಳು ನಿಖರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಬದ್ಧವಾಗಿದೆ ಎಂದು ಸೀತಾರಾಮ್ ಯೆಚೂರಿ ಹೇಳಿದರು.
ಪಕ್ಷದ ಸಮಾವೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀಕರಣ ಮತ್ತು ವಿದೇಶಿ ಹೂಡಿಕೆಗೆ ಅವಕಾಶ ನೀಡುವ ನೀತಿಯನ್ನು ಪಿಣರಾಯಿ ವಿಜಯನ್ ಮಂಡಿಸಿದ್ದರು. ಇದು ವಿವಾದವಾಗಿರುವ ಸನ್ನಿವೇಶದಲ್ಲಿ ಯೆಚೂರಿ ವಿವರಣೆ ನೀಡಿ ವಿವಾದ ತಣಿಸುವ ಮಾತುಗಳನ್ನು ಆಡಿದ್ದಾರೆ.