ಹವಾಮಾನ ಬದಲಾವಣೆ ಕುರಿತು ಇಂಟರ್‌ಗವರ್ನಮೆಂಟಲ್ ಪ್ಯಾನಲ್(ಐಪಿಸಿಸಿ) ವರ್ಕಿಂಗ್ ಗ್ರೂಪ್ II ರ ವರದಿ 'ಹವಾಮಾನ ಬದಲಾವಣೆ 2022: ಪರಿಣಾಮಗಳು, ಅಳವಡಿಕೆ ಮತ್ತು ಮಾಲಿನ್ಯ ಮಾಪನ'ದಲ್ಲಿ, ಮುಂದಿನ ಎರಡು ದಶಕಗಳಲ್ಲಿ ಜಾಗತಿಕವಾಗಿ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಜಗತ್ತು ಅನಿವಾರ್ಯವಾಗಿ ಹಲವು ಹವಾಮಾನದ ಅಪಾಯಗಳನ್ನು ಎದುರಿಸಸಬೇಕಾಗುತ್ತದೆ ಎಂದು ಹೇಳಿದೆ.
ಈ ತಾಪಮಾನ ಏರಿಕೆ ಮಿತಿ ಮೀರಿದರೆ ಹೆಚ್ಚುವರಿ ತೀವ್ರ ಪರಿಣಾಮಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಕೆಲವು ಪರಿಣಾಮಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಲಾಗದು ಎಂದು ಅದು ಹೇಳಿದೆ.
ಗ್ರೀನ್‌ಪೀಸ್ ಇಂಡಿಯಾದ ಪ್ರಚಾರ ನಿರ್ವಾಹಕ ಅವಿನಾಶ್ ಚಂಚಲ್ ಮಾತನಾಡಿ, 'ಈ ವರದಿಯಿಂದ ಹೊರಹೊಮ್ಮಿರುವ ಕ್ರೂರ ಸತ್ಯಗಳನ್ನು ವಿಶ್ವದ ನಾಯಕರು ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಎದುರಿಸಬೇಕಾಗುತ್ತದೆ. ಇದರಿಂದಾಗಿ ಪರಸ್ಪರ ಸಂಬಂಧ ಹೊಂದಿರುವ ಸವಾಲುಗಳಿಗೆ ಪರಿಹಾರಗಳು ಲಭ್ಯವಾಗುತ್ತವೆ' ಎಂದಿದ್ದಾರೆ.
'ಇಂದಿನ ನವೀಕರಿಸಿದ ಐಪಿಸಿಸಿ ಸಂಶೋಧನೆಗಳು, ಹವಾಮಾನ ಬದಲಾವಣೆಯು ಮಾನವ ಹಕ್ಕುಗಳ ಸಮಸ್ಯೆ ಎಂಬುದನ್ನು ಸ್ಪಷ್ಟಪಡಿಸಿದೆ. ಜಾಗತಿಕ ದಕ್ಷಿಣದಲ್ಲಿನ ಅತ್ಯಂತ ದುರ್ಬಲ ಮತ್ತು ಬಡ ಸಮುದಾಯಗಳು ಈಗಾಗಲೇ ಹವಾಮಾನದ ಬಿಕ್ಕಟ್ಟಿನಿಂದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿವೆ. ಇದನ್ನು ತಡೆಯಲು ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ ಎಂಬುದನ್ನು ಮನಗಾಣಬೇಕಿದೆ' ಎಂದು ಹೇಳಿದ್ದಾರೆ.
ಭಾರತದಂತಹ ಹವಾಮಾನ ದುರ್ಬಲವಾಗಿರುವ ದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸಾವಿನ ಪ್ರಮಾಣವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಮತ್ತು ನಿಗಮಗಳು ಹವಾಮಾನ ವೈಪರೀತ್ಯದಿಂದಾಗುವ ನಷ್ಟ, ಹಾನಿ ಮತ್ತು ಇತರೆ ಅನ್ಯಾಯಗಳ ಮೇಲೆ ಹೆಚ್ಚುತ್ತಿರುವ ಅಂತರವನ್ನು ಸರಿಪಡಿಸಿಕೊಳ್ಳಲು ಕ್ರಮಕೈಗೊಳ್ಳಬೇಕು. ಐಪಿಸಿಸಿ ವರದಿಯು ಈವರೆಗೆ ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳನ್ನು ಅತ್ಯಂತ ವಿಸ್ತಾರವಾದ ವೈಜ್ಞಾನಿಕ ಮೌಲ್ಯಮಾಪನದೊಂದಿಗೆ ಪ್ರಸ್ತುತಪಡಿಸಿದೆ ಎಂದರು.