ಕಾಸರಗೋಡು: ರಸ್ತೆ ಅಭಿವೃದ್ಧಿ ಹೆಸರಲ್ಲಿ ರಸ್ತೆಬದಿಯ ನೆರಳು ನೀಡುತ್ತಿದ್ದ ಮರಗಳನ್ನು ಕಡಿದುರುಳಿಸುವುದರ ಜತೆಗೆ ಪ್ರಯಾಣಿಕರ ತಂಗುದಾಣಗಳನ್ನು ಕೆಡವಿಹಾಕಲಾಗಿರುವುದರಿಂದ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕಾಸರಗೋಡು ತಾಲೂಕು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಒತ್ತಾಯಿಸಲಾಯಿತು.
ಚೆರ್ಕಳದಿಂದ ತಲಪ್ಪಾಡಿ ವರೆಗೂ ರಸ್ತೆ ಬದಿಯ ತಂಗುದಾಣಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದ್ದು, ಇದರಿಂದ ಪ್ರಯಾಣಿಕರು ಬಿಸಿಲಿಗೆ ಮೈಯೊಡ್ಡಿ ಬಸ್ಸಿಗೆ ಕಾದುನಿಲ್ಲಬೇಕಾಗಿದೆ. ಅತಿಯಾದ ಬಿಸಿಲಿನಿಂದ ಸಂಕಷ್ಟ ಅನುಭವಿಸುವ ಮಧ್ಯೆ ಕೆಲವು ಖಾಸಗಿ ಬಸ್‍ಗಳು ವಿದ್ಯಾರ್ಥಿಗಳನ್ನು ಹತ್ತಿಸದೆ ಅವರನ್ನು ಸಮಸ್ಯೆಗೆ ತಳ್ಳುತ್ತಿರುವ ಬಗ್ಗೆಯೂ ಗಮನ ಹರಿಸಬೇಕು. ಕಾಸರಗೋಡು ಆಯುರ್ವೇದ ಆಸ್ಪತ್ರೆ ವಠಾರದಲ್ಲಿ ಹಾದುಹೋಗುವ ರಸ್ತೆಯನ್ನು ಆಸ್ಪತ್ರೆ ಧೀನದ ಜಾಗವನ್ನು ಹೊರತುಪಡಿಸಿ, ಒಂದು ಪಾಶ್ರ್ವದಿಂದ ಸಾಗುವಂತೆ ಕ್ರಮ ಕೈಗೊಳ್ಳುವಂತೆಯೂ ಸಭೆಯಲ್ಲಿ ಒತ್ತಾಯಿಸಲಾಯಿತು. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಎ ಸೈಮಾ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಗ್ರಾಪಂ ಅಧ್ಯಕ್ಷರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.