ಜಿನೀವಾ: ರಷ್ಯಾ-ಉಕ್ರೇನ್ ಯುದ್ಧ ಮುಂದುವರೆದಿರುವಂತೆಯೇ ಇತ್ತ ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮಂಡಿಸಲಾಗುತ್ತಿರುವ ಖಂಡನಾ ನಿರ್ಣಯಕ್ಕೆ ಭಾರತದ ಪ್ರತಿನಿಧಿಗಳು ಮತ್ತೆ ಗೈರಾಗಿದ್ದಾರೆ.
ಆ ಮೂಲಕ ಒಂದೇ ವಾರದ ಅವಧಿಯಲ್ಲಿ ಭಾರತವು ಯುಎನ್ ಜಿಎ ಸಭೆಗೆ ಮೂರನೇ ಬಾರಿಗೆ ಗೈರಾಗಿದೆ. ಇನ್ನು ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣವನ್ನು ಯುಎನ್ ಜನರಲ್ ಅಸೆಂಬ್ಲಿ ಬಲವಾಗಿ ಖಂಡಿಸಿತು. 193-ಸದಸ್ಯ ಬಲದ ಜನರಲ್ ಅಸೆಂಬ್ಲಿ ಬುಧವಾರ ತನ್ನ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಗಳಲ್ಲಿ ಉಕ್ರೇನ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಲು ಮತ ಚಲಾಯಿಸಿತು. ನಿರ್ಣಯಕ್ಕೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲು 2/3 ಬಹುಮತದ ಅಗತ್ಯವಿತ್ತು. ಈ ಪೈಕಿ ಖಂಡನಾ ನಿರ್ಣಯದ ಪರವಾಗಿ 141 ಮತಗಳು ಬಂದಿದ್ದು, ಐದು ಸದಸ್ಯ ರಾಷ್ಟ್ರಗಳು ವಿರುದ್ಧವಾಗಿ ಮತಗಳು ಚಲಾಯಿಸಿದಪು. ಅಂತೆಯೇ ಭಾರತ ಸೇರಿದಂತೆ 35 ರಾಷ್ಟ್ರದ ಸದಸ್ಯರು ಗೈರಾಗಿದ್ದರು.
ನಿರ್ಣಯ ಅಂಗೀಕರಿಸುತ್ತಿದ್ದಂತೆ ಮಹಾಸಭೆ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿತು. ಅಂತೆಯೇ ಸಭೆಯ ನಿರ್ಣಯವು ತನ್ನ ಪರಮಾಣು ಪಡೆಗಳ ಸನ್ನದ್ಧತೆಯನ್ನು ಹೆಚ್ಚಿಸುವ ರಷ್ಯಾದ ನಿರ್ಧಾರವನ್ನು ಖಂಡಿಸಿತು ಮತ್ತು ಉಕ್ರೇನ್ ವಿರುದ್ಧ ಬಲದ ಈ "ಕಾನೂನುಬಾಹಿರ ಬಳಕೆ" ಯಲ್ಲಿ ಬೆಲಾರಸ್ ಒಳಗೊಳ್ಳುವಿಕೆಯನ್ನು ಖಂಡಿಸಿ, ಅಂತಾರಾಷ್ಟ್ರೀಯ ಕಟ್ಟುಪಾಡುಗಳಿಗೆ ಬದ್ಧವಾಗಿರಲು ಕರೆ ನೀಡಿತು.
ರಾಜಕೀಯ ಮಾತುಕತೆ, ಮಧ್ಯಸ್ಥಿಕೆ ಮತ್ತು ಇತರ ಶಾಂತಿಯುತ ವಿಧಾನಗಳ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ತಕ್ಷಣದ ಶಾಂತಿಯುತ ಪರಿಹಾರವನ್ನು ನಿರ್ಣಯವು ಒತ್ತಾಯಿಸಿತು.