ಬದಿಯಡ್ಕ: ಆಧುನಿಕ ಜಗತ್ತು ಎಲ್ಲಾ ಕ್ಷೇತ್ರಗಳಲ್ಲೂ ಅ|ಭಿವೃದ್ದಿಯ ವೇಗದಲ್ಲಿ ಸಾಗುತ್ತಿರುವುದು ಹೌದಾದರೂ, ಜೀವಜಾಲಗಳ ಬದುಕಿನ ಮೂಲ ಆವಶ್ಯಕತೆಗಳಲ್ಲಿ ಪ್ರಮುಖವಾದ ಶುದ್ದಜಲ ಲಭ್ಯತೆಯ ಕೊರತೆಯ ಭೀತಿ ಕಳವಳಕಾರಿಯಾಗಿ ನಮ್ಮಿದಿರಿದೆ. ಈ ನಿಟ್ಟಿನಲ್ಲಿ ಜಲಮೂಲಗಳ ಸಂರಕ್ಷಣೆಗೆ ಎಲ್ಲರೂ ಸಮರೋಪಾದಿಯಲ್ಲಿ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಬದಿಯಡ್ಕ ಗ್ರಾ.ಪಂ.ಅಧ್ಯಕ್ಷೆ ಶಾಂತಾ ಬಿ.ಹೇಳಿದರು.
ವಿಶ್ವ ಜಲ ದಿನದ ಅಂಗವಾಗಿ ಶ್ರೀಸತ್ಯಸಾಯಿ ಓರ್ಫನೇಜ್ ಟ್ರಸ್ಟ್ ನೇತೃತ್ವದಲ್ಲಿ ಬದಿಯಡ್ಕ ಗ್ರಾ.ಪಂ. ಹಾಗೂ ನೀರ್ಚಾಲು ಜಲಸ್ನೇಹಿಗಳ ಸಹಕಾರದೊಂದಿಗೆ ನೀರ್ಚಾಲು ಮದಕ ಪರಿಸರದಲ್ಲಿ ಮಂಗಳವಾರ ನಡೆದ ಮಾಹಿತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯಾಡಳಿತಗಳ ಸಹಕಾರದೊಂದಿಗೆ ಜನಸಹಭಾಗಿತ್ವದಲ್ಲಿ ಜಲ ಸಂರಕ್ಷಣೆಗೆ ಅಗತ್ಯವಾದ ಕಾರ್ಯಯೋಜನೆಗಳನ್ನು ಆಸಕ್ತರ ನೆರವು, ಸಲಹೆಗಳೊಂದಿಗೆ ಕೈಗೊಳ್ಳಬೇಕು. ವಿದ್ಯಾರ್ಥಿ ಹರೆಯದಲ್ಲೇ ಈ ಬಗೆಗಿನ ಅರಿವು ಮೂಡಿಸುವ ಅಗತ್ಯ ಇದೆ ಎಂದವರು ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯೆ ಸ್ವಪ್ನಾ ಕೆ.ಪಿ. ಅಧ್ಯಕ್ಷತೆ ವಹಿಸಿದ್ದರು. ಮಣ್ಣು ಮತ್ತು ಜಲ ಸಂರಕ್ಷಣೆಯ ಜಿಲ್ಲಾ ಅಧಿಕಾರಿ ವಿ.ಎಂ.ಅ|ಶೋಕ್ ಕುಮಾರ್ ಹಾಗೂ ಜಲತಜ್ಞ, ಪ್ರಾಧ್ಯಾಪಕ ವಿ.ಪುರುಷೋತ್ತಮ ಭಟ್ ವಾಶೆ ಜಲ ಸಂರಕ್ಷಣೆ, ಮಿತಬಳಕೆ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ತರಗತಿ ನಡೆಸಿದರು. ಜಲಜೀವನ್ ಮಿಷನ್ ನ ಸಂಯೋಜಕಿ ದೀಪ್ತಿ ಎಸ್ ಕುಂಜತ್ತೂರು ಅವರು ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿ ಮಾತನಾಡಿ, ಪ್ರಸ್ತುತ ಈ ಯೋಜನೆಯ ಆರಂಭಿಕ ಹಂತದ ಸರ್ವೆ, ಅವಲೋಕನ, ಜಾಗೃತಿ ಚಟುವಟಿಕೆಗಳು ಈಗ ನಡೆಯುತ್ತಿದೆ ಎಂದು ತಿಳಿಸಿದರು.
ಡಿ.ಕೆ.ಶ್ರೀಕೃಷ್ಣ ಭಟ್, ಬಾಲಕೃಷ್ಣ ನಾಯಕ್ ನೀರ್ಚಾಲು, ಶ್ಯಾಮ ಭಟ್ ಏವುಂಜೆ, ಪಿ.ಜಿ.ಶ್ರೀಕೃಷ್ಣ ಭಟ್ ಪುದುಕೋಳಿ, ನಾರಾಯಣ ಭಟ್, ಸುಬ್ರಹ್ಮಣ್ಯ ಆಚಾರ್ಯ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಜಲಜೀವನ್ ಮಿಷನ್ ನೇತೃತ್ವದಲ್ಲಿ ಮದಕದ ಸಮೀಪ ಹಕ್ಕಿಗಳಿಗಾಗಿ ನೀರಿನ ಸೌಲಭ್ಯದ ಮಡಕೆಗೆ ಚಾಲನೆ ನೀಡಲಾಯಿತು. ಬೇಸಿಗೆ ಕಾಲದ ಬಿರುಬಿಸಿಲಿಗೆ ಪಕ್ಷಿಗಳಿಗೆ ನೀರಿನ ಲಭ್ಯತೆ ಕೊರತೆಯಾಗಬಾರದೆಂಬ ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಈ ಮೂಲಕ ಹೊಸ ಪ್ರಯತ್ನಕ್ಕೆ ನಾಂದಿ ಹಾಡಲಾಯಿತು.
ರಾಜ್ಯ ಕೃಷಿ ಅಭಿವೃದ್ದಿ ಸಮಿತಿ ಮಾಜಿ ಸದಸ್ಯ ಎಂ.ಎಚ್.ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಜಲಜೀವನ್ ಮಿಷನ್ ಬದಿಯಡ್ಕ ಪಂಚಾಯತಿ ಸಂಯೋಜಕ ವಿಜಿತ್ ಬಿ. ವಂದಿಸಿದರು. ದಿನಾಚರಣೆಯ ಭಾಗವಾಗಿ ಜಲಸಂರಕ್ಷಣಾ ಪ್ರತಿಜ್ಞೆ ಸ್ವೀಕರಿಸಲಾಯಿತು.
ವಿಶೇಷ:
ಸಮಾರಂಭದ ಅ0ಗವಾಗಿ ಆಯೋಜಿಸಿದ ಸಂವಾದ ಮಹತ್ತರ ನಿರ್ಧಾರಗಳಿಗೆ ಸಾಕ್ಷಿಯಾಯಿತು. ಅಭಿವೃದ್ದಿಯ ಭಾಗವಾಗಿ ಅಗಲೀಕರಣಗೊಳ್ಳುತ್ತಿರುವ ಕುಂಬಳೆ ಮುಳ್ಳೇರಿಯ ರಸ್ತೆ ನಿರ್ಮಾಣ ಕಾಮಗಾರಿಯ ಭಾಗವಾಗಿ ರಸ್ತೆಯ ಇಕ್ಕೆಲಗಳ ಶತಮಾನಗಳಷ್ಟು ಹಳೆಯ ಬೃಹತ್ ಮರಗಳನ್ನು ಕಡಿದು ಉರುಳಿಸಲಾಗಿದ್ದು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಿ.ಜಿ.ಶ್ರೀಕೃಷ್ಣ ಭಟ್ ಪುದುಕೋಳಿ ಮತ್ತು ಸಾರ್ವಜನಿಕರ ಮನವಿಗೆ , ಸ್ಥಳೀಯಾಡಳಿತದ ಸಹಕಾರದೊಂದಿಗೆ ಮುಂದಿನ ವಿಶ್ವ ಪರಿಸರ ದಿನಾಚರಣೆಯಂದು ನೀರ್ಚಾಲು ಪರಿಸರದ ರಸ್ತೆ ಬದಿಗಳಲ್ಲಿ ಉತ್ತಮ ತಳಿಯ ಮರಗಳ ಸಸಿಗಳನ್ನು ನೆಟ್ಟು ಬೆಳೆಸಲು ತೀರ್ಮಾನಿಸಲಾಗಿದೆ. ಗ್ರಾ.ಪಂ. ಎಲ್ಲಾ ನೆರವು ನೀಡುವುದಾಗಿ ಅಧ್ಯಕ್ಷೆ ಶಾಂತಾ ಬಿ ಈ ಸಂದರ್ಭ ಭರವಸೆ ನೀಡಿದರು.