ಮುಂಬೈ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರ ರಚನೆಯತ್ತ ಸಾಗಿರುವಂತೆಯೇ ಇತ್ತ ಭಾರತೀಯ ಷೇರುಮಾರುಕಟ್ಟೆ ಕೂಡ ಏರಿಕೆ ದಾಖಲಿಸಿದೆ.
ಗುರುವಾರ ಭಾರತೀಯ ಷೇರುಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಹೂಡಿಕೆದಾರರು ಷೇರು ಖರೀದಿಗೆ ಮುಂದಾಗಿದ್ದು ಇದು ಮಾರುಕಟ್ಟೆ ಏರಿಕೆಗೆ ಕಾರಣವಾಯಿತು ಎನ್ನಲಾಗಿದೆ. ಅಲ್ಲದೆ ಈ ಹಿಂದೆ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದ್ದ ರಷ್ಯಾ-ಉಕ್ರೇನ್ ಸಂಘರ್ಷದ ವಿಚಾರವಾಗಿ ರಷ್ಯಾ ಮತ್ತು ಉಕ್ರೇನ್ ನಡುವಿನ ರಾಜತಾಂತ್ರಿಕ ಮಾತುಕತೆಗಳು ಚಾಲ್ತಿಯಲ್ಲಿದ್ದು ಇದು ಕೂಡ ಮಾರುಕಟ್ಟೆ ಉತ್ಸಾಹವನ್ನು ಹೆಚ್ಚಿಸಿದೆ ಎನ್ನಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಜಾಗತಿಕ ಷೇರುಗಳಲ್ಲಿ ಸಾಮಾನ್ಯ ಏರಿಕೆ ಕಂಡಬರುತ್ತಿದ್ದು, ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಷೇರುಮಾರುಕಟ್ಟೆ ಏರಿಕೆ ದಾಖಲಾಸಿದೆ.
ಆದಾಗ್ಯೂ ವಿಶ್ಲೇಷಕರು ಈಕ್ವಿಟಿಗಳ ರ್ಯಾಲಿಯು ಅಪಾಯಗಳು ಉಳಿದಿರುವುದರಿಂದ ತೀವ್ರ ಹಿಮ್ಮುಖಕ್ಕೆ ಒಳಗಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.
ಮಾರುಕಟ್ಟೆ ಮೇಲೆ ಪಂಚರಾಜ್ಯಗಳ ಚುನಾವಣೆ ಎಫೆಕ್ಟ್
ಮಾರುಕಟ್ಟೆ ಮೇಲೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಪರಿಣಾಮ ಕೂಡ ಉಂಟಾಗಿದ್ದು, ಹೂಡಿಕೆದಾರರು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣಾ ಫಲಿತಾಂಶಗಳತ್ತ ಗಮನ ಹರಿಸಿ ಹೂಡಿಕೆ ಮಾಡತೊಡಗಿದ್ದಾರೆ. ಬೆಳಗ್ಗೆ ವಹಿವಾಟು ಆರಂಭವಾದಾಗ ಃSಇ ಸೆನ್ಸೆಕ್ಸ್ 1,322 ಅಂಕಗಳ ಅಥವಾ ಶೇ.2.42ರಷ್ಟು ಏರಿಕೆ ಕಂಡು 55,969 ಕ್ಕೆ ತಲುಪಿತು. ಅಂತೆಯೇ ಎನ್‌ಎಸ್‌ಇ ನಿಫ್ಟಿ 380 ಅಂಕಗಳ ಅಥವಾ ಶೇ. 2.32 ರಷ್ಟು ಏರಿಕೆಯಾಗಿ 16,725 ಕ್ಕೆ ತಲುಪಿದೆ.
ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕವು ಶೇಕಡಾ 1.69 ರಷ್ಟು ಹೆಚ್ಚು ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಶೇಕಡಾ 2.03 ರಷ್ಟು ಏರಿಕೆಯಾಗಿರುವುದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಧನಾತ್ಮಕ ವಲಯದಲ್ಲಿ ವಹಿವಾಟು ನಡೆಸುತ್ತಿವೆ. ಪ್ರಮುಖವಾಗಿ ನಿಫ್ಟಿ ಆಟೋ, ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಆಟೋ ಕ್ರಮವಾಗಿ ಶೇ. 3.12 ಮತ್ತು 3.32 ರಷ್ಟು ಏರಿಕೆಯಾಗಿದೆ. ಇಂದಿನ ವಹಿವಾಟಿನಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆ ಹೆಚ್ಚಿನ ಲಾಭ ಪಡೆದಿದ್ದು, ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ 6.23 ರಷ್ಟು ಏರಿಕೆಯಾಗಿ ಪ್ರತೀ ಷೇರು 431.20ರೂಗೆ ಏರಿಕೆಯಾಗಿದೆ.
ಉಳಿದಂತೆ ಆಕ್ಸಿಸ್ ಬ್ಯಾಂಕ್, ಗ್ರಾಸಿಮ್ ಇಂಡಸ್ಟ್ರೀಸ್, ಮಾರುತಿ ಮತ್ತು ಏಷ್ಯನ್ ಪೇಂಟ್ಸ್ ಸಂಸ್ಥೆಗಳೂ ಕೂಡ ಲಾಭ ಗಳಿಸಿದ್ದು, ಬ್ಯಾಕಿಂಗ್ ವಲಯದಲ್ಲಿ ಆಕ್ಸಿಸ್ ಬ್ಯಾಂಕ್, ಮಾರುತಿ, ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಟಾಪ್ ಗೇನರ್‌ಗಳಾಗಿದ್ದರೆ ಏಷ್ಯನ್ ಪೇಂಟ್ಸ್ ಸಂಸ್ಥೆಯ ಷೇರುಗಳು ಕೂಡ ಏರಿಕೆ ದಾಖಲಿಸಿದೆ.