ಡೆಹರಾಡೂನ್: ಬಿಜೆಪಿ ಶಾಸಕಿ ರಿತು ಖಂಡೂರಿ ಅವರು ಉತ್ತರಾಖಂಡ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿ ಆಯ್ಕೆಯಾದರು.
ಮಾಜಿ ಸಿಎಂ ಬಿ.ಸಿ. ಖಂಡೂರಿ ಅವರ ಪುತ್ರಿ ರಿತು ಖಂಡೂರಿ ಅವರು ಶನಿವಾರ 5ನೇ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು.
ರಿತು ಖಂಡೂರಿ ಅವರು ಕೋಟದ್ವಾರ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎಸ್. ನೇಗಿ ವಿರುದ್ಧ 3 ಸಾವಿರ ಮತಗಳ ಅಂತರದಿಂದ ವಿಧಾನಸಭೆಗೆ ಗೆದ್ದು ಬಂದಿದ್ದರು. 2017ರಲ್ಲಿ ಯಮಕೇಶ್ವರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು. ರಾಜಕೀಯಕ್ಕೆ ಬರುವ ಮೊದಲು ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು.
ಮೊದಲ ಬಾರಿ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಿದ ಬಳಿಕ ಕಲಾಪದ ಬಹಳಷ್ಟು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಸ್ಪೀಕರ್ ರಿತು ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ 'ನಮಗೆ ಇದೊಂದು ಐತಿಹಾಸಿಕ ದಿನ. ಮಹಿಳೆಯೊಬ್ಬರು ಮೊದಲ ಬಾರಿಗೆ ಸ್ಪೀಕರ್ ಆಗಿ ಆಯ್ಕೆಯಾದ ದಿನವಿದು.ಉತ್ತರಾಖಂಡದ ಏಳ್ಗೆಯಲ್ಲಿ ಪಾತ್ರವಹಿಸಿದ ಎಲ್ಲ ಮಹಿಳೆಯರಿಗೆ ಗೌರವವಿದು'' ಎಂದರು.
ವಿಪಕ್ಷ ನಾಯಕರಾದ ಪ್ರೀತಮ್ ಸಿಂಗ್ ಮತ್ತು ಯಶ್‌ಪಾಲ್ ಆರ್ಯಾ ಅವರು ರಿತು ಅವರಿಗೆ ಶುಭಾಶಯ ಕೋರಿದರು. ಸಾರ್ವಜನಿಕ ಬದುಕಲ್ಲಿ ಮತ್ತು ಕಲಾಪದಲ್ಲಿನ ಆರೋಗ್ಯಕರ ಚರ್ಚೆಯಲ್ಲಿ ತಂದೆಯವರ ಪರಂಪರೆಯನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.