ನವದೆಹಲಿ : ಕೇಂದ್ರ ಸರ್ಕಾರದ ಮಧ್ಯಾಹ್ನದ ಊಟ ಯೋಜನೆ ಪಿಎಂ-ಪೋಷಣ್ ಮತ್ತು ಪ್ರಾಥಮಿಕ ಶಿಕ್ಷಣ ಯೋಜನೆ -ಸಮಗ್ರ ಶಿಕ್ಷಾ ಅಭಿಯಾನಕ್ಕೆ ಒದಗಿಸಲಾಗುವ ಅನುದಾನವನ್ನು ಸಂಪೂರ್ಣವಾಗಿ ಬಳಸಲಾಗಿಲ್ಲ ಎಂಬ ವಿಚಾರವನ್ನು ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಜನ ಮತ್ತು ಕ್ರೀಡಾ ಸಂಸದೀಯ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಈ ವರದಿಯನ್ನು ರಾಜ್ಯಸಭಾ ವೆಬ್‍ಸೈಟ್‍ನಲ್ಲಿ ಗುರುವಾರ ಅಪ್‍ಲೋಡ್ ಮಾಡಲಾಗಿದೆ.
ಬಿಜೆಪಿ ರಾಜ್ಯಸಭಾ ಸಂಸದ ವಿನಯ್ ಪಿ ಸಹಸ್ರಬುದ್ಧೆ ಅವರ ನೇತೃತ್ವದ ಸಂಸದೀಯ ಸಮಿತಿ ಈ ವರದಿ ನೀಡಿದೆ. ವರದಿಯ ಪ್ರಕಾರ ಜನವರಿ 31ರಂದು ಇದ್ದಂತೆ ಈ ವರ್ಷದ ಬಜೆಟ್‍ನಲ್ಲಿ ಸಮಗ್ರ ಶಿಕ್ಷಾ ಅಭಿಯಾನದಡಿಯಲ್ಲಿ ಒದಗಿಸಲಾಗಿದ್ದು ರೂ 37,383.36 ಕೋಟಿ ಮೊತ್ತದಲ್ಲಿ ಕೇವಲ ರೂ. 16,821.70 (ಶೇ 55) ಮಾತ್ರ ಬಳಸಲಾಗಿದೆ.
ಪಿಎಂ-ಪೋಷಣ್ ಯೋಜನೆಯಡಿ ಒದಗಿಸಲಾಗಿದ್ದ ರೂ. 11,500 ಕೋಟಿ ಪೈಕಿ ಕೇವಲ ರೂ 6,660.54 (ಶೇ 57.91) ಮಾತ್ರ ಬಳಕೆಯಾಗಿದೆ ಎಂದು ವರದಿ ಹೇಳಿದೆ.
ಒದಗಿಸಲಾದ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡದೇ ಇರುವುದು ಅಸ್ವೀಕಾರ್ಹ ಹಾಗೂ ಇದಕ್ಕೆ ಕಾರಣಗಳನ್ನು ಕೇಂದ್ರ ಸರ್ಕಾರ ಗುರುತಿಸಬೇಕು ಎಂದು ಸಮಿತಿ ಹೇಳಿದೆ.
ಗುಡ್ಡಗಾಡು ಪ್ರದೇಶಗಳಿರುವ ಸ್ಥಳಗಳಲ್ಲಿ ದೂರದ ಸ್ಥಳಗಳಿಗೆ ತೆರಳಿ ಮಕ್ಕಳಿಗೆ ಶಿಕ್ಷಣ ಪಡೆಯುವುದು ಕಷ್ಟಕರವಾಗಿರುವುದನ್ನು ಗಮನಿಸಿ ಉತ್ತರ ಮತ್ತು ಈಶಾನ್ಯ ಭಾಗಗಳ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚು ಶಾಲೆಗಳನ್ನು ತೆರೆಯಲು ಸಮಿತಿ ಶಿಫಾರಸು ಮಾಡಿದೆ.