ನವದೆಹಲಿ: ರಷ್ಯಾದ ಸೇನೆ ಉಕ್ರೇನ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ಆಕ್ರಮಣ ಮಾಡುತ್ತಿದೆ. ಇತಹ ಪರಿಸ್ಥಿತಿಯಲ್ಲಿ ಅಲ್ಲಿ ಸಿಕ್ಕಿಬಿದ್ದಿರುವ ಇತರ ದೇಶಗಳ ನಾಗರಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿವಹಿಸಲಾಗುತ್ತಿದೆ. ಈಗ ಭಾರತದಲ್ಲೂ ಈ ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೇ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ವಕೀಲರೊಬ್ಬರು, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ಭಾರತೀಯ ವಿದ್ಯಾರ್ಥಿಗಳನ್ನು ಶೀಘ್ರವಾಗಿ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಈ ಅರ್ಜಿಗೆ ಪ್ರತಿಕ್ರಿಯಿಸಿದ ಸಿಜೆಐ ಎನ್‌ವಿ ರಮಣ, ವಿದ್ಯಾರ್ಥಿಗಳ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದರೆ ಇದರಲ್ಲಿ ನ್ಯಾಯಾಲಯ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಯುದ್ಧವನ್ನು ನಿಲ್ಲಿಸುವಂತೆ ಪುಟಿನ್‌ಗೆ ನಾವು ಆದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿಲ್ಲ. ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ವಿಷಯದಲ್ಲಿ ಭಾರತ ಸರ್ಕಾರ ಇನ್ನೇನು ಮಾಡಲು ಸಾಧ್ಯ ಎಂದು ಅಟಾರ್ನಿ ಜನರಲ್ ಅವರನ್ನು ಪ್ರಶ್ನೆ ಮಾಡಿತು.
ಅರ್ಜಿದಾರರು ಉಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ ಎಂದು ತಿಳಿಸಿದ ಅರ್ಜಿದಾರ ಪರ ವಕೀಲರು, ಉಕ್ರೇನ್ ನಲ್ಲಿ 250 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ರೊಮಾನಿಯಾ ಗಡಿಯಿಂದ ಅವರನ್ನು ಸ್ಥಳಾಂತರಿಸಲಾಗುತ್ತಿಲ್ಲ. ಅವರು ಉಕ್ರೇನ್ ಗಡಿಯಲ್ಲಿ ಸಿಲುಕಿಕೊಂಡಿದ್ದು, ರೊಮಾನಿಯಾ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ್ದಾರೆ. ರೊಮಾನಿಯಾಗೆ ಸಚಿವರೊಬ್ಬರನ್ನೂ ಕಳುಹಿಸಲಾಗಿದೆ. ಸರ್ಕಾರವೇ ಎಲ್ಲವನ್ನೂ ಮಾಡುತ್ತಿದ್ದು, ಈ ವಿದ್ಯಾರ್ಥಿಗಳನ್ನು ಕೂಡ ಆದಷ್ಟು ಬೇಗ ಸ್ಥಳಾಂತರಿಸಲಾಗುತ್ತದೆ ಎಂದು ತಿಳಿಸಿದರು.
ರೊಮಾನಿಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಅಟಾರ್ನಿ ಜನರಲ್ ಅವರಿಗೆ ಆದೇಶಿಸಿತು. ಈ ಮಧ್ಯೆ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು 3726 ಭಾರತೀಯರನ್ನು ಇಂದು ಆಪರೇಷನ್ ಗಂಗಾ ಅಡಿಯಲ್ಲಿ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಭಾರತಕ್ಕೆ ಕರೆತರಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇವೆಲ್ಲವನ್ನೂ ಮರಳಿ ತರಲು ಬುಕಾರೆಸ್ಟ್‌ನಿಂದ 8, ಸುಸೇವಾದಿಂದ 2, ಕೊಸಿಸ್‌ನಿಂದ 1, ಬುಡಾಪೆಸ್ಟ್‌ನಿಂದ 5 ಮತ್ತು ರೆಜೊದಿಂದ 3 ವಿಮಾನಗಳು ಕಾರ್ಯಾಚರಣೆ ಮಾಡಲಿವೆ.