ನವದೆಹಲಿ: ಯೂಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುವ ಮುನ್ಸೂಚನೆ ಸಿಕ್ಕಾಗಲೇ ಅಲ್ಲಿಂದ ಹಿಂದಿರುಗುವಂತೆ ಭಾರತದ ವಿದ್ಯಾರ್ಥಿಗಳಿಗೆ ಸಂದೇಶ ರವಾನೆ ಆಗಿತ್ತು. ಆದರೆ, ಯೂಕ್ರೇನ್ ಯೂನಿವರ್ಸಿಟಿಗಳ ಒತ್ತಡದ ಕಾರಣ ವಿದ್ಯಾರ್ಥಿಗಳು ಹಿಂದಿರುಗಲಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ಗೆ ಮಂಗಳವಾರ ತಿಳಿಸಿದೆ.
ಇದಲ್ಲದೆ ರಾಜಕೀಯ ನೇತಾರರು ನೀಡಿದ ದಾರಿ ತಪ್ಪಿಸುವ ಹೇಳಿಕೆಯಿಂದಲೂ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು. ಹೀಗಾಗಿ ಅವರಿಗೆ ಸರಿಯಾದ ನಿರ್ಧಾರ ತೆಗೆದುಕೊಂಡು ಅಲ್ಲಿಂದ ಹಿಂದಿರುಗುವುದು ಸಾಧ್ಯವಾಗಲಿಲ್ಲ. ಆದಾಗ್ಯೂ ಭಾರತೀಯರ ಹಿತ ಕಾಪಾಡುವಲ್ಲಿ ಸರ್ಕಾರ ತೆಗೆದುಕೊಂಡ ನಿಲುವು ಮತ್ತು ರಾಜತಾಂತ್ರಿಕ ಪ್ರಯತ್ನಗಳು ಹೆಚ್ಚಿನ ಫಲ ಕೊಟ್ಟಿವೆ ಎಂದು ಸರ್ಕಾರ ವಿವರಿಸಿದೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಈ ಕುರಿತು ಸಂಸತ್ನಲ್ಲಿ ಮಾತನಾಡಿದ್ದು, ಆಪರೇಷನ್ ಗಂಗಾ ಮೂಲಕ ಇದುವರೆಗೆ 22,500 ಭಾರತೀಯರು ಮತ್ತು 18 ವಿವಿಧ ರಾಷ್ಟ್ರಗಳ 147 ಪೌರರನ್ನು ಯೂಕ್ರೇನ್ನಿಂದ ವಾಪಸ್ ಕರೆತರಲಾಗಿದೆ. ದಕ್ಷಿಣ ಯೂಕ್ರೇನ್ನಲ್ಲಿ ಇನ್ನು ಕೂಡ ಕೆಲವು ಭಾರತೀಯರು ಉಳಿದಿದ್ದು, ಅವರನ್ನು ಕರೆತರಲು ರಷ್ಯಾ ಮಾರ್ಗವನ್ನು ಬಳಸಲಿದ್ದೇವೆ. ಯೂಕ್ರೇನ್ನಲ್ಲಿ ಇನ್ನು ಉಳಿದುಕೊಂಡಿರುವವರ ಸಂಖ್ಯೆ 100ರ ಗಡಿ ದಾಟದು. ಬಹುತೇಕರು ಸ್ವಂತ ಇಚ್ಛೆಯಿಂದ ಅಲ್ಲಿ ಉಳಿದುಕೊಂಡಿದ್ದಾರೆೆ ಎಂದು ತಿಳಿಸಿದರು. ಈ ಮಧ್ಯೆ, ಖೆರ್ಸನ್ ನಗರದಲ್ಲಿದ್ದ ಮೂವರು ಭಾರತೀಯರು ಮಾಸ್ಕೊ ಮಾರ್ಗವಾಗಿ ಸ್ಥಳಾಂತರವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಫೆ.15ರಂದು ಮೊದಲ ಸೂಚನೆ: ಭಾರತದ ರಾಯಭಾರ ಕಚೇರಿ ಫೆ.15ರಂದು ಮೊದಲ ಸಲಹಾ ಮಾರ್ಗಸೂಚಿಯನ್ನು ಯೂಕ್ರೇನ್ನಲ್ಲಿ ಪ್ರಕಟಿಸಿತ್ತು. ಯೂಕ್ರೇನ್ನಲ್ಲಿ ಉಳಿದುಕೊಳ್ಳುವುದು ಸುರಕ್ಷಿತವಲ್ಲ ಎಂಬ ಸಂದೇಶವನ್ನು ರವಾನಿಸಿತ್ತು. 20,000ದಷ್ಟು ಭಾರತೀಯರು ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದರು. ಇದಾಗಿ, ಫೆ.20, 22ರಂದು ಪುನಃ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ನಮ್ಮ ನಿರಂತರ ಪ್ರಯತ್ನದ ಹೊರತಾಗಿಯೂ ವಿದ್ಯಾರ್ಥಿಗಳು ಅಲ್ಲೇ ಉಳಿದುಕೊಂಡರು. ಇದಕ್ಕೆ ಯೂಕ್ರೇನ್ ಯೂನಿವರ್ಸಿಟಿಗಳ ಒತ್ತಡ ಕಾರಣವಾಗಿತ್ತು. ಇದಲ್ಲದೆ, ಫೆ.24ರ ಆಸುಪಾಸಿನಲ್ಲಿ ರಾಜಕೀಯ ಹೇಳಿಕೆಗಳು ಕೂಡ ವಿದ್ಯಾರ್ಥಿಗಳ ನಿರ್ಣಯದ ಮೇಲೆ ಪ್ರಭಾವ ಬೀರಿದ್ದವು ಎಂದು ಸಚಿವರು ವಿವರಿಸಿದರು.
ಪಾಕ್ ಕ್ಷಿಪಣಿ ಪ್ರಕರಣ ಉನ್ನತ ಮಟ್ಟದ ತನಿಖೆ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಖಾನೇವಾಲ್ ಜಿಲ್ಲೆಯ ಮಿಯಾನ್ ಛಾನು ಪ್ರದೇಶದಲ್ಲಿ ಮಾ.9ರಂದು ಭಾರತದ ಕ್ಷಿಪಣಿ ಪತನವಾಗಿದೆ ಎಂದು ಪಾಕ್ನ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಶನ್ಸ್ನ ಡೈರೆಕ್ಟರ್ ಜನರಲ್ ಮೇಜರ್ ಜನರಲ್ ಬಾಬರ್ ಇಫ್ತಿಖರ್ ಹೇಳಿದ್ದರು. ಪಾಕಿಸ್ತಾನ ಸರ್ಕಾರ ಭಾರತದ ರಾಯಭಾರಿಯನ್ನು ಕರೆಸಿ ಆಕ್ಷೇಪವನ್ನೂ ವ್ಯಕ್ತಪಡಿಸಿತ್ತು. ಇದು ತಾಂತ್ರಿಕ ದೋಷದಿಂದ ಆಗಿರುವಂಥದ್ದು ಎಂದು ಸೇನೆ ಹೇಳಿತ್ತಲ್ಲದೆ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸಂಸತ್ಗೆ ತಿಳಿಸಿದರು. ಏತನ್ಮಧ್ಯೆ, ಈ ಹೇಳಿಕೆಯನ್ನು ನಿರಾಕರಿಸಿರುವ ಪಾಕ್, ಜಂಟಿ ತನಿಖೆ ನಡೆಸಬೇಕು ಎಂದು ಮತ್ತೆ ಒತ್ತಾಯಿಸಿದೆ.
ಜಿಎಸ್ಟಿ ಪ್ರಶ್ನೆಯಲ್ಲೂ ರಾಜಕೀಯ: ಜಿಎಸ್ಟಿ ಕೌನ್ಸಿಲ್ನ ನಿರ್ಣಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ಫೆಡರಲ್ ಸಂಸ್ಥೆಗೆ ಅಗೌರವ ತೋರಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಕ್ಷೇಪ ವ್ಯಕ್ತಪಡಿಸಿದರು. ಎನ್ಸಿಪಿ ಸದಸ್ಯೆ ವಂದನಾ ಚವಾಣ್ ಕೇಳಿದ ಪ್ರಶ್ನೆಯಲ್ಲಿ ಬಿಜೆಪಿಯೇತರ ಆಳ್ವಿಕೆಯ ರಾಜ್ಯಗಳಿಗೆ ಜಿಎಸ್ಟಿ ಪರಿಹಾರದ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಉಳಿಸಿರುವುದೇಕೆ ಎಂಬ ಉಲ್ಲೇಖವಿತ್ತು. ಇದೇ ವೇಳೆ, ರಾಜ್ಯಗಳಿಗೆ ಇನ್ನೂ 53,600 ಕೋಟಿ ರೂಪಾಯಿಗೂ ಅಧಿಕ ಜಿಎಸ್ಟಿ ಪರಿಹಾರವನ್ನು ಬಿಡುಗಡೆ ಮಾಡಬೇಕಷ್ಟೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಂಗಳವಾರ ತಿಳಿಸಿದೆ.
ರೈಲ್ವೆ ಖಾಸಗೀಕರಣ, ಸರ್ಕಾರದ ನಿಲುವೇನು?: ಏರ್ ಇಂಡಿಯಾ ಖಾಸಗೀಕರಣಗೊಳಿಸಿದ ಬಳಿಕ ರೈಲ್ವೆ ಖಾಸಗೀಕರಣದ ಬಗ್ಗೆ ಸರ್ಕಾರದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. 2022-23ನೇ ಸಾಲಿನ ಅನುದಾನ ಬೇಡಿಕೆ ಸಂಬಂಧಿಸಿದ ಚರ್ಚೆಯ ವೇಳೆ ಕಾಂಗ್ರೆಸ್ ಸದಸ್ಯ ಸುರೇಶ್, ಈ ಆಗ್ರಹ ಮಾಡಿದರು. ಇದಕ್ಕೆ ಉಳಿದವರು ದನಿಗೂಡಿಸಿದರು. 2022-23ನೇ ಸಾಲಿಗೆ ರೈಲ್ವೆಯ ಆಂತರಿಕ ಕಂದಾಯ 2.40 ಲಕ್ಷ ಕೋಟಿ ಆಗಿದ್ದು, ಪ್ರಸಕ್ತ ಸಾಲಿಗೆ ಹೋಲಿಸಿದರೆ ಶೇಕಡ 19 ಹೆಚ್ಚಿದೆ. ಆದರೆ, 1.3 ಲಕ್ಷ ಕೋಟಿ ರೂಪಾಯಿ ಬೆಂಬಲವಷ್ಟೇ ರೈಲ್ವೆಗೆ ಇದ್ದು, ಉಳಿದ ಹಣಕಾಸು ಹೊಂದಿಕೆಗೆ ಏನು ಮಾಡಲಾಗುತ್ತದೆ ಎಂದು ಪ್ರಶ್ನಿಸಿದರು.