ನವದೆಹಲಿ: ದೇಶದ ಎಲ್ಲಾ ವಯಸ್ಕರು ಕೋವಿಡ್ -19 ಲಸಿಕೆಯ ಬೂಸ್ಟರ್ ಡೋಸ್‌ಗೆ ಅರ್ಹರೆಂದು ಪರಿಗಣಿಸಲು ಭಾರತವು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜೊತೆಗೆ, ಭಾರತೀಯರು ಮೂರನೇ ಡೋಸ್ ಲಸಿಕೆ ಪಡೆಯದೆ ವಿದೇಶಗಳಿಗೆ ಪ್ರಯಾಣಿಸಲು ಕಷ್ಟವಾಗುತ್ತಿರುವುದರಿಮದ ಈ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಭಾರತದಲ್ಲಿ ಈಗ ಬೂಸ್ಟರ್ ಡೋಸ್ ಲಸಿಕೆಗಳನ್ನು ತೆಗೆದುಕೊಳ್ಳಲು ಅನುಮತಿಸಲಾಗಿದೆ.
ಇತರರಿಗೂ ಬೂಸ್ಟರ್ ಡೋಸ್ ಲಸಿಕೆಗಳನ್ನು ಉಚಿತವಾಗಿ ನೀಡಬೇಕೆ ಎಂಬ ಬಗ್ಗೆ ಸರ್ಕಾರವು ಚರ್ಚಿಸುತ್ತಿದೆ ಎಂದು ಮೂಲವೊಂದು ತಿಳಿಸಿದೆ. ಆರೋಗ್ಯ ಸಚಿವಾಲಯದ ವಕ್ತಾರರು ಸದ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಎಲ್ಲ ವಯಸ್ಕರಿಗೆ ಬೂಸ್ಟರ್ ಡೋಸ್ ಲಸಿಕೆಗೆ ಅವಕಾಶ ನೀಡಬೇಕೆಂದು ಸಂಸದರೂ ಸಹ ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.
ಏಷ್ಯಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಕೊರೊನಾ ಉಲ್ಬಣವನ್ನು ಉಲ್ಲೇಖಿಸಿ ಕಣ್ಗಾವಲು ಕ್ರಮಗಳನ್ನು ಹೆಚ್ಚಿಸಲು ರಾಜ್ಯಗಳಿಗೆ ಕಳೆದ ವಾರ ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿತ್ತು. ಚೀನಾ ಮತ್ತು ಇಟಲಿಯಂತಹ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ.
ದೇಶದಲ್ಲಿ ಸದ್ಯ 181 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದ್ದು ಇದರಲ್ಲಿ 2 ಕೋಟಿಗೂ ಹೆಚ್ಚು ಬೂಸ್ಟರ್ ಡೋಸ್‌ಗಳಾಗಿವೆ.