ನವದೆಹಲಿ: ನಾಗರಿಕ ಸೇವಾ ಪರೀಕ್ಷೆಗಳ ಮೂಲಕ 2022 ರಿಂದ 2030ರ ವರೆಗಿನ ಅವಧಿಯಲ್ಲಿ ಐಎಎಸ್ ಅಧಿಕಾರಿಗಳ ನೇರ ನೇಮಕಾತಿಗೆ ಸಂಬಂಧಿಸಿ ಶಿಫಾರಸುಗಳನ್ನು ಮಾಡಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದರು.
2021ರವರೆಗೆ, ನಾಗರಿಕ ಸೇವಾ ಪರೀಕ್ಷೆಗಳ ಮೂಲಕ ವಾರ್ಷಿಕವಾಗಿ ನೇಮಕ ಮಾಡಿಕೊಳ್ಳುವ ಐಎಎಸ್ ಅಧಿಕಾರಿಗಳ ಸಂಖ್ಯೆಯನ್ನು 180ಕ್ಕೆ ಹೆಚ್ಚಿಸಲಾಗಿತ್ತು. ಅದೇ ರೀತಿ, 2020ರಿಂದ ಅನ್ವಯವಾಗುವಂತೆ, ಐಪಿಎಸ್ ಅಧಿಕಾರಿಗಳ ಸಂಖ್ಯೆಯನ್ನು 150 ರಿಂದ 200ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.
'ರಾಜ್ಯಗಳಲ್ಲಿ ಆಡಳಿತ ಸೇವೆಯಲ್ಲಿರುವ ಅಧಿಕಾರಿಗಳನ್ನು ಖಾಲಿ ಇರುವ ಕೇಂದ್ರ ಸೇವೆಯ ಹುದ್ದೆಗಳಿಗೆ ನೇಮಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಕೇಂದ್ರ ಲೋಕಸೇವಾ ಆಯೋಗವು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಆಯ್ಕೆ ಸಮಿತಿ ಸಭೆ ನಡೆಸಿದೆ' ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.