ನವದೆಹಲಿ: ದೇಶದ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುವಂತೆ ಭಾರತಕ್ಕೆ ರಷ್ಯಾ ಮನವಿ ಮಾಡಿದೆ. ಜತೆಗೆ, ಭಾರತದಲ್ಲಿ ವ್ಯಾಪಾರ ಜಾಲವನ್ನು ವಿಸ್ತರಿಸಲು ಉತ್ಸುಕವಾಗಿರುವುದಾಗಿಯೂ ರಷ್ಯಾ ಶನಿವಾರ ಹೇಳಿದೆ.
ಉಕ್ರೇನ್ ಮೇಲಿನ ಆಕ್ರಮಣಕ್ಕೆ ಪ್ರತಿಯಾಗಿ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ತೀವ್ರ ನಿರ್ಬಂಧಗಳನ್ನು ವಿಧಿಸಿವೆ.
ಹೀಗಾಗಿ, 1991ರ ಸೋವಿಯತ್ ಒಕ್ಕೂಟದ ಪತನದ ನಂತರ ಇದೇ ಮೊದಲ ಬಾರಿಗೆ ರಷ್ಯಾದ ಆರ್ಥಿಕತೆಯು ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ.
ಉಕ್ರೇನ್‌ನ ವಿರುದ್ಧದ ರಷ್ಯಾದ ಆಕ್ರಮಣವನ್ನು ಖಂಡಿಸುವಂತೆ ವಿಶ್ವದ ಹಲವು ರಾಷ್ಟ್ರಗಳು ಭಾರತದ ಮೇಲೆ ಒತ್ತಡ ಹಾಕಿವೆಯಾದರೂ, ಭಾರತ, ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ಧ ಮತಹಾಕುವುದರಿಂದ ದೂರು ಉಳಿದು ತಟಸ್ಥ ನಡೆ ಪ್ರದರ್ಶಿಸಿದೆ.
'ಭಾರತಕ್ಕೆ ರಷ್ಯಾದ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನದ ರಫ್ತು ಪ್ರಮಾಣ 1 ಬಿಲಿಯನ್ ಡಾಲರ್ (₹7675 ಕೋಟಿ) ತಲುಪಿದೆ. ಇದನ್ನು ಹೆಚ್ಚಿಸಲು ವಿಪುಲ ಅವಕಾಶಗಳಿವೆ' ಎಂದು ರಷ್ಯಾದ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ನೊವಾಕ್ ಶುಕ್ರವಾರ ತಡರಾತ್ರಿ ಹೇಳಿದ್ದಾರೆ. ಈ ಕುರಿತು ಭಾರತದಲ್ಲಿರುವ ರಷ್ಯಾದ ರಾಯಭಾರ ಕಚೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
'ರಷ್ಯಾದ ತೈಲ ಮತ್ತು ಅನಿಲ ವಲಯಕ್ಕೆ ಭಾರತೀಯ ಹೂಡಿಕೆಯನ್ನು ಆಕರ್ಷಿಸಲು ಮತ್ತು ಭಾರತದಲ್ಲಿ ರಷ್ಯಾದ ಕಂಪನಿಗಳ ವ್ಯಾಪಾರ ಜಾಲಗಳನ್ನು ವಿಸ್ತರಿಸಲು ನಾವು ಆಸಕ್ತಿ ಹೊಂದಿದ್ದೇವೆ' ಎಂದು ನೊವಾಕ್ ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ತಿಳಿಸಿದ್ದಾರೆ.
ಅಮೆರಿಕ ಈ ವಾರ ರಷ್ಯಾದ ತೈಲ ಆಮದನ್ನು ನಿಷೇಧಿಸಿತು. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ವರ್ಷಾಂತ್ಯದ ಒಳಗಾಗಿ ಹಂತಹಂತವಾಗಿ ನಿಲ್ಲಿಸುವುದಾಗಿ ಬ್ರಿಟನ್ ಘೋಷಿಸಿದೆ. ಈ ನಿರ್ಧಾರಗಳಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಮತ್ತಷ್ಟು ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆಗಳಿವೆ.
ಕಚ್ಚಾ ತೈಲ ರಫ್ತಿನಲ್ಲಿ ರಷ್ಯಾ ಜಗತ್ತಿನ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿದೆ.