ನವದೆಹಲಿ: ರಷ್ಯಾ-ಉಕ್ರೇನ್ ಕದನ ಮುಂದುವರೆದಿರುವಂತೆಯೇ ಜಾಗತಿಕ ಷೇರುಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ತಲ್ಲಣ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಬಹು ನಿರೀಕ್ಷಿತ ಎಲ್ಐಸಿ ಐಪಿಒ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಷ್ಯಾ–ಉಕ್ರೇನ್ ಸಂಘರ್ಷವು ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿರುವ ಕಾರಣ ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒ ಮುಂದೂಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವಿತ್ತ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಎಲ್ಐಸಿಯ ಒಟ್ಟು ಪಾಲಿಸಿದಾರರ ಸಂಖ್ಯೆಗೆ ಹೋಲಿಸಿದರೆ ತಮ್ಮ ಪಾಲಿಸಿಗೆ ಪಾನ್ಕಾರ್ಡ್ ಜೋಡಿಸಿಕೊಂಡವರ ಸಂಖ್ಯೆ ಕಡಿಮೆ. ಅವರ ಪೈಕಿ ಡಿಮ್ಯಾಟ್ ಖಾತೆ ಇರುವವರು ಇನ್ನೂ ಕಡಿಮೆ. ಹೀಗಾಗಿ ಎಲ್ಐಸಿ ಐಪಿಒ ಘೋಷಣೆಯ ಅವಧಿ ತುಸು ಮುಂದೂಡಬೇಕು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗತ್ತು.
ಈ ಕುರಿತು ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, 'ಇದು ಯುದ್ಧದ ಸಂದರ್ಭ. ಈಗ ಐಪಿಒಗೆ ಹೋಗುವ ಮುನ್ನ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸುವ ಅಗತ್ಯ ಇದೆ. ಕಂಪನಿಯು ಗರಿಷ್ಠ ಮಟ್ಟದ ಮಾರುಕಟ್ಟೆ ಮೌಲ್ಯ ಪಡೆಯುವ ಅವಕಾಶಕ್ಕಾಗಿ ಕಾದು ನೋಡುಬೇಕಾಗಿದೆ. ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಐಪಿಒ ಸಮಯದ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಹ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Portfolio Investors – FPI) ಭಾರತವೂ ಸೇರಿದಂತೆ ಹಲವು ಷೇರುಪೇಟೆಗಳಿಂದ ಹೂಡಿಕೆ ಹಿಂದಕ್ಕೆ ಪಡೆಯುತ್ತಿದ್ದಾರೆ. ಷೇರುಪೇಟೆಯಲ್ಲಿ ಏರಿಳಿತಗಳ ಹೊಯ್ದಾಟ ಹೆಚ್ಚಾಗುತ್ತಿದೆ. ಅದೆಲ್ಲಕ್ಕಿಂತಲೂ ಮುಖ್ಯವಾಗಿ ಮಾರ್ಚ್ ತಿಂಗಳು ದೊಡ್ಡಮಟ್ಟದ ಐಪಿಒಗೆ ಸೂಕ್ತ ಸಮಯ ಅಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇದೇ ವಿಚಾರವಾಗಿ ಆಂಗ್ಲ ಪತ್ರಿಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ನಿರ್ಮಲಾ ಸೀತಾರಾಮನ್ ಅವರು, 'ಯೋಜನೆಗೆ ಅನುಗುಣವಾಗಿಯೇ ನಾವು ಮುಂದುವರಿಯಲು ಬಯಸುತ್ತೇವೆ. ಆದರೆ, ಜಾಗತಿಕ ಪರಿಸ್ಥಿತಿಯನ್ನು ಗಮನಿಸಿದರೆ ಮತ್ತೊಮ್ಮೆ ಪರಿಶೀಲನೆ ನಡೆಸುವ ಅಗತ್ಯ ಇದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಷೇರು ವಿಕ್ರಯದಿಂದ ₹ 78 ಸಾವಿರ ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಇದಕ್ಕೆ ಪೂರಕವಾಗಿ ಎಲ್‌ಐಸಿಯಲ್ಲಿ ಹೊಂದಿರುವ ಷೇರುಗಳಲ್ಲಿ ಶೇಕಡ 5ರಷ್ಟನ್ನು ಮಾರಾಟ ಮಾಡುವ ಮೂಲಕ ₹ 63 ಸಾವಿರ ಕೋಟಿ ಸಂಗ್ರಹಿಸಲು ಮುಂದಾಗಿದೆ. ಒಂದೊಮ್ಮೆ ಎಲ್‌ಐಸಿ ಐಪಿಒ ಅನ್ನು ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಿದರೆ ಕೇಂದ್ರ ಸರ್ಕಾರದ ಷೇರುವಿಕ್ರಯದ ಗುರಿಯು ಭಾರಿ ಪ್ರಮಾಣದಲ್ಲಿ ತಪ್ಪಲಿದೆ.