ನವದೆಹಲಿ:ಅಹ್ಮದಾಬಾದ್ ನ ಸಾಬರಮತಿ ಆಶ್ರಮವನ್ನು ಪುನರ್ ಅಭಿವೃದ್ಧಿಗೊಳಿಸಲು ಗುಜರಾತ್ ಸರಕಾರದ ನಿರ್ಧಾರದ ವಿರುದ್ಧ ತಾನು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಗುಜರಾತ್ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಾತ್ಮಾ ಗಾಂಧಿಯವರ ಮರಿಮೊಮ್ಮಗ ತುಷಾರ ಗಾಂಧಿಯವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಎ.1ರಂದು ಕೈಗೆತ್ತಿಕೊಳ್ಳಲಿದೆ.
ಪುನರ್ ಅಭಿವೃದ್ಧಿ ಯೋಜನೆಯು ಸಾಬರಮತಿ ಆಶ್ರಮದ ಭೌತಿಕ ಸ್ವರೂಪವನ್ನು ಬದಲಿಸುತ್ತದೆ ಮತ್ತು ಗಾಂಧೀಜಿಯವರ ಸಿದ್ಧಾಂತವನ್ನು ಸಾಕಾರಗೊಳಿಸಿರುವ ಅದರ ಪ್ರಾಚೀನ ಸರಳತೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿರುವ ತುಷಾರ ಗಾಂಧಿ, ಪುನರ್ ಅಭಿವೃದ್ಧಿಯ ಸ್ವರೂಪ ಮತ್ತು ಯೋಜನೆಯ ಪರಿಕಲ್ಪನೆ ಹಾಗೂ ಅನುಷ್ಠಾನದಲ್ಲಿ ಸರಕಾರಿ ಅಧಿಕಾರಿಗಳ ಅತಿಯಾದ ಪಾಲ್ಗೊಳ್ಳುವಿಕೆಯಿಂದ ಆಶ್ರಮವು ಗಾಂಧಿ ತತ್ತ್ವಗಳನ್ನು ಕಳೆದುಕೊಳ್ಳಬಹುದು ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯ ಆಶ್ರಮವಿರುವ ಒಂದು ಎಕರೆ ವಿಸ್ತೀರ್ಣದಲ್ಲಿಯ ಮೂರು ಪ್ರಮುಖ ಆಕರ್ಷಣೆಗಳಿಗೆ ತಾನು ಕೈ ಹಚ್ಚುವುದಿಲ್ಲ ಎಂದು ಗುಜರಾತ್ ಸರಕಾರವು ನೀಡಿರುವ ಭರವಸೆಯನ್ನು ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಬೆಟ್ಟು ಮಾಡಿತ್ತು.
ಭೂಮಿಯ ಮಹತ್ವವು ಒಂದು ಎಕರೆಯಲ್ಲಿಯ ಆಶ್ರಮಕ್ಕೆ ಮಾತ್ರ ಸೀಮಿತವಾಗಿಲ್ಲ, ಸಾಬರಮತಿ ದಂಡೆಯಲ್ಲಿನ 100 ಎಕರೆಗೂ ಅಧಿಕ ಆಸ್ತಿಯು ಮಹತ್ವದ್ದಾಗಿದೆ. ಈ ಭೂಮಿಯು ಪ್ರೇರಣೆಯ ಮೂಲವಾಗಿದೆ ಮತ್ತು ಗಾಂಧೀಜಿಯವರ ಜೀವನ ಅಭಿಯಾನದ ಸ್ಮಾರಕವಾಗಿದೆ. ಇದು ಮಾತ್ರವಲ್ಲ, ಗಾಂಧಿಯವರ ಕಾಲದಲ್ಲಿ ಸಾಬರಮತಿ ಆಶ್ರಮದಲ್ಲಿ ವಾಸವಿದ್ದ ಕುಟುಂಬಗಳ ಸಂತತಿಗಳಿಗೂ ಇಲ್ಲಿಯ ಇಡೀ ಭೂಪ್ರದೇಶವು ಆಶ್ರಯವನ್ನು ಒದಗಿಸಿದೆ.
ಪುನರ್ ಅಭಿವೃದ್ಧಿ ಯೋಜನೆಯು ಈಗಾಗಲೇ ಈ ಕುಟುಂಬಗಳನ್ನು ಅವರ ಮನೆಗಳಿಂದ ತೆರವುಗೊಳಿಸಿದೆ. ಇದು ಸಾಬರಮತಿ ಆಶ್ರಮ ಮತ್ತು ಅದಕ್ಕೆ ಹೊಂದಿಕೊಂಡಿರುವ ಭೂಮಿಯನ್ನು ಹರಿಜನ ಸೇವಕ ಸಂಘಕ್ಕೆ ಹಸ್ತಾಂತರದ ವೇಳೆ ನೀಡಲಾಗಿದ್ದ ಲಿಖಿತ ಸೂಚನೆಗಳಿಗೆ ವಿರುದ್ಧವಾಗಿದೆ ಎದು ತುಷಾರ ಗಾಂಧಿ ಅರ್ಜಿಯಲ್ಲಿ ವಾದಿಸಿದ್ದಾರೆ.
1,200 ಕೋ.ರೂ.ವೆಚ್ಚದ ಗಾಂಧಿ ಆಶ್ರಮ ಸ್ಮಾರಕ ಮತ್ತು ಪರಿಸರ ಅಭಿವೃದ್ಧಿ ಯೋಜನೆಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಂಟಿಯಾಗಿ ಕೈಗೆತ್ತಿಕೊಂಡಿವೆ. ಮಹಾತ್ಮಾ ಗಾಂಧಿ 1917ರಿಂದ 1930ರವರೆಗೆ ಸಾಬರಮತಿ ಆಶ್ರಮದಲ್ಲಿ ವಾಸವಾಗಿದ್ದರು.
ಪಾರಂಪರಿಕ ಕಟ್ಟಡಗಳನ್ನು ಒಟ್ಟುಗೂಡಿಸುವ ಮತ್ತು ಪರಿಸರ ಮರುಸ್ಥಾಪನೆಯ ಮೂಲಕ ಈಗಿರುವ ಐದು ಎಕರೆಗಳಿಂದ 55 ಎಕರೆ ಪ್ರದೇಶದಲ್ಲಿ ಯೋಜನೆಯು ಅನುಷ್ಠಾನಗೊಳ್ಳಲಿದೆ.