ನವದೆಹಲಿ: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಆದರೆ ಚುನಾವಣಾ ಫಲಿತಾಂಶಕ್ಕಿಂತ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಹೆಚ್ಚಳವಾಗಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಇಷ್ಟು ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಡೆ ಹಿಡಿದಿದ್ದ ಕೇಂದ್ರ ಸರ್ಕಾರ ಈಗ ಚುನಾವಣಾ ಫಲಿತಾಂಶದ ನಂತರ ತೈಲ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ತೈಲ ಕಂಪನಿಗಳು ಇಂಧನ ಬೆಲೆಗಳನ್ನು ನಿರ್ಧರಿಸುತ್ತವೆ. ಆದರೆ ದೇಶದಲ್ಲಿ ಕಚ್ಚಾ ತೈಲದ ಕೊರತೆಯಿಲ್ಲ ಎಂದು ಹೇಳಿದ್ದಾರೆ.
ಆದಾಗ್ಯೂ, ನಾಗರಿಕರ ಹಿತದೃಷ್ಟಿಯಿಂದ ಸರ್ಕಾರವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಪುರಿ ತಿಳಿಸಿದ್ದಾರೆ.
"ದೇಶದಲ್ಲಿ ಕಚ್ಚಾ ತೈಲದ ಕೊರತೆ ಉಂಟಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಮ್ಮ ಅಗತ್ಯತೆಗಳಲ್ಲಿ ಶೇ. 85 ರಷ್ಟು ಕಚ್ಚಾ ತೈಲದ ಆಮದು ಮತ್ತು ಶೇ. 50-55 ರಷ್ಟು ಅನಿಲದ ಮೇಲೆ ಅವಲಂಬಿತವಾಗಿದ್ದರೂ ಸಹ, ನಮ್ಮ ತೈಲ ಅವಶ್ಯಕತೆಗಳನ್ನು ಪೂರೈಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಪುರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಕೆ ಮಾಡಿದ್ದು, ಚುನಾವಣೆ ಬಳಿಕ ಮತ್ತೆ ದರ ಏರಿಕೆ ಮಾಡಲಿದೆ ಎಂಬ ಆರೋಪವನ್ನು ಪೆಟ್ರೋಲಿಯಂ ಸಚಿವರು ತಳ್ಳಿಹಾಕಿದ್ದಾರೆ.
"ತೈಲ ಬೆಲೆಗಳನ್ನು ಜಾಗತಿಕ ಬೆಲೆಗಳಿಂದ ನಿರ್ಧರಿಸಲಾಗುತ್ತದೆ ಮತ್ತು ಪ್ರಪಂಚದ ಒಂದು ಭಾಗದಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ. ಅದರ ಪರಿಣಾಮ ತೈಲ ಕಂಪನಿಗಳ ಮೇಲೂ ಬೀರುತ್ತದೆ. ತೈಲ ಕಂಪನಿಗಳು ಸ್ವತಃ ಬೆಲೆಗಳನ್ನು ನಿರ್ಧರಿಸುತ್ತವೆ. ನಾವು ಜನರ ಹಿತದೃಷ್ಟಿಯಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಪುರಿ ಹೇಳಿದ್ದಾರೆ.