ಪೆರ್ಲ: ಸ್ರ್ತೀ ಪಕ್ಷ ನವ ಕೇರಳ ಅಭಿಯಾನದಂಗವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ಕಾಸರಗೋಡು ನೇತೃತ್ವದಲ್ಲಿ ಹಮ್ಮಿಕೊಂಡ ಕಲಾ ಜಾಥಾ ಪರ್ಯಟನೆಗೆ ಎಣ್ಮಕಜೆ ಪಂಚಾಯತಿನ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಶನಿವಾರ ಉಜ್ವಲ ಸ್ವಾಗತ ನೀಡಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯತಿನ ಮುಖ್ಯ ಪೇಟೆಯಾದ ಪೆರ್ಲಕ್ಕೆ ತಲುಪಿದ ಕಲಾ ಜಾಥವನ್ನು ಅಂಚೆ ಕಚೇರಿ ಬಳಿಯಿಂದ ಕುಟುಂಬಶ್ರೀ ಸದಸ್ಯೆಯರ ಸಹಭಾಗಿತ್ವದಲ್ಲಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ತೆಂಕು ತಿಟ್ಟಿನ ಯಕ್ಷಗಾನ ವೇಷಗಳು, ನಾಸಿಕ್ ಬ್ಯಾಂಡ್ ಮೆರವಣಿಗೆಯಲ್ಲಿ ಗಮನ ಸೆಳೆದವು. ಬಳಿಕ ಪೆರ್ಲ ಪೇಟೆಯ ಗಾಂಧೀಕಟ್ಟೆ ಪರಿಸರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಜಿ.ಪಂ.ಸದಸ್ಯ ನಾರಾಯಣ ನಾಯ್ಕ್ , ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್, ಪಂ.ಸದಸ್ಯರಾದ ಕುಸುಮಾವತೀ, ರಾಮಚಂದ್ರ ಎಂ,ಉಷಾ ಕುಮಾರಿ,ಜಿಲ್ಲಾ ಅಸಿಸ್ಟೆಂಟ್ ಕೋರ್ಡಿನೇಟರ್ ಪ್ರಕಾಶ್, ರೇಷ್ಮಾ, ಸಿಡಿಎಸ್ ಅಕೌಂಟೆಟ್ ಸುನೀತಾ ಹಾಗೂ ಸಿಡಿಎಸ್ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕುಟುಂಬಶ್ರೀ ಸದಸ್ಯರಾದ ರಂಗಶ್ರೀ ತಂಡದ ಕಲಾವಿದರು ಜಾಗೃತಿ ಮೂಡಿಸುವ ನೃತ್ಯ ನಾಟಕಗಳನ್ನು ಪ್ರದರ್ಶಿಸಿದರು. ಸ್ವಾಗತ ಮೆರವಣಿಗೆಗೆ ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ, ಉದಯಕುಮಾರಿ, ಸಾಮಾಜಿಕ ಮುಂದಾಳುಗಳಾದ ರಾಮಕೃಷ್ಣ ರೈ ಕುದ್ವ, ವಿನೋದ್ ಪೆರ್ಲ, ಆನಂದ ಕೆ,ಸಿಡಿಎಸ್ ಸದಸ್ಯರು,ಎಡಿಎಸ್ ಅಧ್ಯಕ್ಷರು,ಸದಸ್ಯರು ನೇತೃತ್ವ ನೀಡಿದರು. ರಂಗಶ್ರೀ ತಂಡದ ಕಲಾವಿದೆಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.