ನವದೆಹಲಿ :ಸಂಘರ್ಷಮಯ ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಭಾರತ ಸರ್ಕಾರದ ಹಾಗೂ ರಾಯಭಾರ ಕಛೇರಿಯ ಯಾವ ಸಹಾಯವೂ ನಮಗೆ ಸಿಗುತ್ತಿಲ್ಲ ಎಂದು ಆರೋಪಿಸುತ್ತಿರುವ ನಡುವೆಯೇ, ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿನಿಯೊಬ್ಬಳು ರಾಯಭಾರ ಕಛೇರಿ ಸಿಬ್ಬಂದಿಗಳ ವಿರುದ್ಧ ಆಘಾತಕಾರಿ ಆರೋಪವನ್ನು ಮಾಡಿದ್ದಾಳೆ.
ಭಾರತಕ್ಕೆ ಮೊದಲು ಕರೆದುಕೊಂಡು ಹೋಗಲು ಬಾತ್‌ರೂಮ್ ಸ್ವಚ್ಛಗೊಳಿಸಿ ಎಂದು ರಾಯಭಾರ ಕಛೇರಿ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ ಎಂದು ಏರ್‌ಪೋರ್ಟ್‌ನಲ್ಲಿ ಬಂದಿಳಿದ ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ್ದಾಳೆ.
'ಒಂದು ಶೆಲ್ಟರ್‌ನಲ್ಲಿ ಸುಮಾರು ಸಾವಿರ ವಿದ್ಯಾರ್ಥಿಗಳು ಇದ್ದೆವು. ಯಾರು ಮೊದಲು ಬಾತ್‌ರೂಮ್ ಕ್ಲೀನ್ ಮಾಡುತ್ತಾರೋ ಅವರನ್ನು ಮೊದಲು ಕರೆದುಕೊಂಡು ಹೋಗುತ್ತೇವೆ ಎಂದು ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಹೇಳಿದ್ದಾರೆ. ನಾವು ಕಷ್ಟದಲ್ಲಿರುವ ಸಮಯದಲ್ಲಿ ನಮ್ಮಲ್ಲಿ ಬಾತ್‌ರೂಮ್ ಸ್ವಚ್ಛಗೊಳಿಸಲು ಹೇಳಿದ್ದಾರೆ' ಎಂದು ವಿದ್ಯಾರ್ಥಿನಿ ಹೇಳುವ ವಿಡಿಯೋ ವೈರಲ್ ಆಗಿದೆ.
ಬಾತ್‌ರೂಮ್ ಸ್ವಚ್ಛಗೊಳಿಸಲು ನಮಗೆ ವಾಲಂಟೈರ್ ಬೇಕು ಎಂದು ಮೊದಲು ಕೇಳಿದರು, ಯಾರೂ ತಯಾರಾಗದಾಗ, ಯಾರು ಬಾತ್‌ರೂಮ್ ಕ್ಲೀನ್ ಮಾಡುತ್ತಾರೋ, ಅವರನ್ನು ಮೊದಲು ಕರೆದುಕೊಂಡು ಹೋಗುತ್ತೇವೆ ಎಂದು ಸಿಬ್ಬಂದಿಗಳು ಆಫರ್ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.
ಈ ವಿಡಿಯೋವನ್ನು ಕಾಂಗ್ರೆಸ್ ಸೇವಾದಳ ಟ್ವಿಟರ್ ಖಾತೆಯಲ್ಲಿ ಹಂಚಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳಿಗೆ ವಿಮಾನ ಹತ್ತುವ ಮೊದಲು ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಹೇಳುವುದು ಅಸಂಬದ್ಧ ಮತ್ತು ಅಸೂಕ್ಷ್ಮ ಪ್ರವೃತ್ತಿ. ಮೋದಿ ಸರಕಾರ ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಸೇವಾದಳ ಟ್ವೀಟ್ ಮಾಡಿದೆ.