ಅನಂತನಾಗ್: ದಶಕಗಳ ಬಳಿಕ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಪುನರಾಗಮನ ಆರಂಭವಾಗುತ್ತಿದ್ದು, ಕಾಶ್ಮೀರಿ ಪಂಡಿತರು ತಾವು ತೊರೆದು ಹೋಗಿದ್ದ ಮನೆಗಳ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಹೌದು.. ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಉಗ್ರಗಾಮಿಗಳ ಸ್ಫೋಟ, ಮತ್ತು ಕೋಮು ಸಂಘರ್ಷದ ನಂತರ ಕಾಶ್ಮೀರದಿಂದ ಹಿಂದೂಗಳ ವಲಸೆಯ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೂ, ಸುಮಾರು ಅರ್ಧ ಡಜನ್ ಕಾಶ್ಮೀರಿ ಪಂಡಿತರ ಕುಟುಂಬಗಳು ಅನಂತನಾಗ್ ಜಿಲ್ಲೆಗೆ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, ದಕ್ಷಿಣ ಕಾಶ್ಮೀರದ ಮಟ್ಟಾನ್‌ನ ಹಳ್ಳಿಯೊಂದರಲ್ಲಿ ಮನೆಗಳನ್ನು ನಿರ್ಮಿಸುತ್ತಿವೆ. ಕಾಶ್ಮೀರದ ಹಾಲಿ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆಯ ನಂತರ, ಈ ಕುಟುಂಬಗಳು ಕಣಿವೆಯಲ್ಲಿ ತಮ್ಮ ತವರುಗಳಿಗೆ ಮರಳಲು ಉತ್ಸುಕರಾಗಿದ್ದಾರೆ.
ತನಗೆ ಮತ್ತು ತನ್ನ ಸಹೋದರನ ಕುಟುಂಬಕ್ಕೆ ಎರಡು ಅಂತಸ್ತಿನ ಮನೆಯನ್ನು ನಿರ್ಮಿಸುತ್ತಿರುವ ಪಂಡಿತ್ ಕಾಕಾಜಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ನಿರ್ಮಾಣ ಕಾರ್ಯವು 2016 ರಲ್ಲಿ ಪ್ರಾರಂಭವಾಯಿತು. ಅವರು ಪ್ರಸ್ತುತ ಕೆಲಸದ ಮೇಲ್ವಿಚಾರಣೆಗಾಗಿ ಹತ್ತಿರದ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮನೆ ನಿರ್ಮಾಣವು ಈ ವರ್ಷ ಪೂರ್ಣಗೊಳ್ಳಲಿದೆ ಎಂದು ನಾನು ಅಂದುಕೊಂಡಿದ್ದೇನೆ ಮತ್ತು ನಾವು 2022 ರಲ್ಲಿ ಗೃಹ ಪ್ರವೇಶಿಸಲು ಉದ್ದೇಶಿಸಿದ್ದೇವೆ ಎಂದು ಹೇಳಿದರು. ಕಾಶ್ಮೀರದಲ್ಲಿ ವಾಸಿಸಲು ಯಾವುದಾದರು ಬೆದರಿಕೆ ಇದೇಯೆ ಎಂದು ಕೇಳಿದಾಗ ಅದಕ್ಕೆ ಉತ್ತರಿಸಿದ ಕಾಕಾಜಿ, “ನನಗೆ ಯಾವುದೇ ಬೆದರಿಕೆ ಇಲ್ಲ. ನಾವು ಗ್ರಾಮದಲ್ಲಿ ಸಂಪೂರ್ಣ ಕೋಮು ಸೌಹಾರ್ದತೆಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಕಣಿವೆಯಲ್ಲಿ ಅನಂತನಾಗ್ ಜಿಲ್ಲೆ ಕಾಶ್ಮೀರದಲ್ಲಿ ಉಗ್ರಗಾಮಿಗಳ ತಾಣವಾಗಿದೆ. ಸ್ಥಳೀಯರ ಪ್ರಕಾರ, ಈ ಗ್ರಾಮದಲ್ಲಿ ಉಗ್ರಗಾಮಿತ್ವ ಸ್ಫೋಟಗೊಳ್ಳುವ ಮೊದಲು ಸುಮಾರು 80 ಪಂಡಿತ ಕುಟುಂಬಗಳು ಇದ್ದವು ಮತ್ತು ಅವರಲ್ಲಿ ಹೆಚ್ಚಿನವರು 1990 ರ ನಂತರ ವಲಸೆ ಬಂದರು. ಅನೇಕ ಪಂಡಿತ್ ಕುಟುಂಬಗಳು ಗ್ರಾಮದಲ್ಲಿ ತಮ್ಮ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ ಎಂದು ಕಾಕಾಜಿ ಹೇಳಿದರು. ಅವರ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ಅವರ ಕಾಶ್ಮೀರಿ ಮುಸ್ಲಿಂ ನೆರೆಹೊರೆಯವರು, ಪಂಡಿತರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಮೂಲಕ ತಮ್ಮ ಮನೆಗಳನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯವನ್ನೂ ಮುಸ್ಲಿಮರೇ ಮಾಡುತ್ತಿದ್ದಾರೆ ಎಂದು ಕಾಕಾಜಿ ಹೇಳಿದರು.
ಪಂಡಿತರು ಮರಳಿ ಬಂದಿರುವುದು ಸ್ವಾಗತಾರ್ಹ ಎಂದು ಗ್ರಾಮಸ್ಥರಾದ ಅಬ್ದುಲ್ ಅಜೀಜ್ ಹೇಳಿದ್ದು, ಅವರು ತಮ್ಮ ಬೇರುಗಳಿಗೆ ಮರಳುತ್ತಿದ್ದಾರೆ ಎಂದು ನಮಗೆ ಸಂತೋಷವಾಗಿದೆ. ಪಂಡಿತರು ಕಾಶ್ಮೀರಿಯಾತ್‌ನ ಭಾಗವಾಗಿದ್ದಾರೆ ಮತ್ತು ಅವರು 1990ರ ದಶಕದ ಮೊದಲು ತಮ್ಮ ಮುಸ್ಲಿಂ ಸಹೋದರರೊಂದಿಗೆ ಹಿಂತಿರುಗಿ ವಾಸಿಸಬೇಕು ಎಂದು ಅವರು ಹೇಳಿದರು.
ಮಟ್ಟಾನ್ ನ ಮಾರ್ತಾಂಡ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಅವರು ಮಾತನಾಡಿ, ಸುಮಾರು ಅರ್ಧ ಡಜನ್ ಪಂಡಿತ್ ಕುಟುಂಬಗಳು ಕಳೆದ ವರ್ಷ ತಮ್ಮ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭಿಸಿದವು. ಅನೇಕ ಪಂಡಿತ್ ಕುಟುಂಬಗಳು ಮರಳಿ ಬರಲು ಉದ್ದೇಶಿಸಿರುವುದರಿಂದ ತಮ್ಮ ಮನೆಗಳನ್ನು ನವೀಕರಿಸಿದ್ದಾರೆ. ಸ್ಥಳೀಯ ಮುಸ್ಲಿಮರು ಕೂಡ ಪಂಡಿತರ ಮರಳುವಿಕೆಯನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತಿದ್ದಾರೆ. ಕಾಶ್ಮೀರದ ಪರಿಸ್ಥಿತಿಯು 1990 ರ ದಶಕದಿಂದ ಬಹಳ ಬದಲಾಗಿದೆ ಮತ್ತು ವಲಸಿಗ ಪಂಡಿತರ ಮರಳುವಿಕೆಗೆ ಅನುಕೂಲಕರವಾಗಿದೆ ಎಂದು ಕುಮಾರ್ ಹೇಳಿದರು.
ಸರ್ಕಾರವು ಉಪಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು 6,000 ಕಾಶ್ಮೀರಿ ಪಂಡಿತರಿಗೆ ಮನೆಗಳನ್ನು ನಿರ್ಮಿಸಬೇಕು, ಅವರಿಗೆ ಪ್ರಧಾನಿ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗಗಳನ್ನು ಒದಗಿಸಬೇಕು. 6,000 ಉದ್ಯೋಗಗಳು ಎಂದರೆ ಅನೇಕ ಕುಟುಂಬಗಳು ಮತ್ತು ಕನಿಷ್ಠ 24,000 ವ್ಯಕ್ತಿಗಳು ಇದರ ಲಾಭ ಪಡೆಯುತ್ತಾರೆ. ಸರ್ಕಾರ ಎಲ್ಲರಿಗೂ ಕ್ವಾರ್ಟರ್ಸ್ ನೀಡಿದರೆ, ಅದು ನೆಲದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರ ನಡುವೆ ಹೆಚ್ಚಿನ ಸಂವಾದಕ್ಕೆ ಕಾರಣವಾಗುತ್ತದೆ ಎಂದು ಕುಮಾರ್ ಹೇಳಿದರು.