ಪಣಜಿ: ಗೋವಾ ಮುಖ್ಯಮಂತ್ರಿಯಾಗಿ ಸತತ 2ನೇ ಅವಧಿಗೆ ಪ್ರಮೋದ್ ಸಾವಂತ್ ಅವರು ಸೋಮವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ರಾಜ್ಯ ರಾಜಧಾನಿ ಪಣಜಿ ಬಳಿಯ ಡಾ ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೈ ಅವರು ಸಾವಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡನಾವಿಸ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೂರು ಬಾರಿ ಶಾಸಕರಾಗಿರುವ ಪ್ರಮೋದ್ ಸಾವಂತ್, ಎರಡನೇ ಬಾರಿಗೆ ಗೋವಾದ ಸಿಎಂ ಆಗಿ ಆಯ್ಕೆಯಾಗಿದ್ದು, ಕೊಂಕಣಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಮೊದಲು ಸಿಎಂ ಆಗಿದ್ದ ಮನೋಹರ್ ಪರಿಕ್ಕರ್ ನಿಧನದ ನಂತರ ಪ್ರಮೋದ್ ಸಾವಂತ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಪ್ರಮಾಣವಚನ ಸ್ವೀಕರಿಸಿದ ಪ್ರಮೋದ್ ಸಾವಂತ್ ಸೇರಿದಂತೆ ಎಲ್ಲರಿಗೂ ಪ್ರಧಾನಿ ಮೋದಿಯವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಈ ಇಡೀ ತಂಡವು ಗೋವಾದ ಜನರಿಗೆ ಉತ್ತಮ ಆಡಳಿತವನ್ನು ನೀಡುತ್ತದೆ ಮತ್ತು ಈ ಹಿಂದೆ ಮಾಡಿದಂತೆ ಜನಪರ ಕೆಲಗಳನ್ನು ಮಾಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಈಗ ಪ್ರಮೋದ್ ಸಾವಂತ್ ಜೊತೆಗೆ ವಿಶ್ವಜಿತ್ ರಾಣೆ, ಮೌವಿನ್ ಗೊಡಿನ್ಹೊ, ರವಿ ನಾಯ್ಕ್, ನೀಲೇಶ್ ಕಬ್ರಾಲ್, ಸುಭಾಷ್ ಶಿರೋಡ್ಕರ್, ರೋಹನ್ ಖೌಂಟೆ, ಗೋವಿಂದ್ ಗೌಡೆ ಮತ್ತು ಅಟಾನಾಸಿಯೊ ಮೊನ್ಸೆರಾಟ್ಟೆ ಅವರು ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ನಡುವೆ ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರು ಮಾರ್ಚ್ 29ರಿಂದ ಎರಡು ದಿನಗಳ ಹೊಸ ವಿಧಾನಸಭೆಯ ಅಧಿವೇಶನವನ್ನು ಕರೆದಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಮೋದ್ ಸಾವಂತ್ ಅವರು ಮಂಗಳವಾರವೇ ವಿಶ್ವಾಸಮತ ಯಾಚನೆ ಮಾಡಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದೆ. ಇದಕ್ಕೂ ಮೊದಲು ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ.