ಕೀವ್: ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧ ಒಂದು ತಿಂಗಳು ಪೂರ್ಣಗೊಳಿಸಿದ್ದು, ಇಂದು ಉಕ್ರೇನ್ ಸೈನಿಕರ ಶೆಲ್ ದಾಳಿಯಲ್ಲಿ ರಷ್ಯಾ ಮೂಲದ ಓರ್ವ ಪತ್ರಕರ್ತೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರಷ್ಯಾ ಮಾಧ್ಯಮಗಳು ವರದಿ ಮಾಡಿದ್ದು, ರಷ್ಯಾದ ಸ್ವತಂತ್ರ ಸುದ್ದಿ ಸಂಸ್ಥೆ ದಿ ಇನ್‌ಸೈಡರ್ ಪತ್ರಕರ್ತೆ ಒಕ್ಸಾನಾ ಬೌಲಿನಾ ಅವರು ಉಕ್ರೇನ್‌ನಲ್ಲಿ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದಿ ಇನ್‌ಸೈಡರ್ ಪತ್ರಿಕೆ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, 'ಒಕ್ಸಾನಾ ಬೌಲಿನಾ ಅವರು ರಾಕೆಟ್ ಗುಂಡಿನ ದಾಳಿಗೆ ಸಿಲುಕಿದಾಗ ರಷ್ಯಾದ ಪಡೆಗಳಿಂದ ರಾಜಧಾನಿಯ ಪೊಡಿಲ್ಸ್ಕಿ ಜಿಲ್ಲೆಯಲ್ಲಿ ಶೆಲ್ ದಾಳಿಯ ವಿನಾಶವನ್ನು ಚಿತ್ರೀಕರಿಸುತ್ತಿದ್ದರು. ಆಕೆಯೊಂದಿಗೆ ಮತ್ತೊಬ್ಬ ನಾಗರೀಕ ಸಾವನ್ನಪ್ಪಿದ್ದಾನೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಒಕ್ಸಾನಾ ಅವರ ಕುಟುಂಬ ಮತ್ತು ಸ್ನೇಹಿತರಿಗೆ ತನ್ನ ಆಳವಾದ ಸಂತಾಪವನ್ನು ಇನ್ಸೈಡರ್ ವ್ಯಕ್ತಪಡಿಸುತ್ತದೆ. ನಾಗರಿಕರು ಮತ್ತು ಪತ್ರಕರ್ತರು ಕೊಲ್ಲಲ್ಪಟ್ಟ ವಸತಿ ಪ್ರದೇಶಗಳ ವಿವೇಚನಾರಹಿತ ಶೆಲ್ ದಾಳಿಯಂತಹ ರಷ್ಯಾದ ಯುದ್ಧ ಅಪರಾಧಗಳು ಸೇರಿದಂತೆ ಉಕ್ರೇನ್‌ನಲ್ಲಿನ ಯುದ್ಧವನ್ನು ನಾವು ಕವರ್ ಮಾಡುವುದನ್ನು ಮುಂದುವರಿಸುತ್ತೇವೆ ಎಂದೂ ಪತ್ರಿಕೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಇದಲ್ಲದೆ, ಕೊಲೆಯಾದ ಪತ್ರಕರ್ತೆಯ ಜೊತೆಯಲ್ಲಿದ್ದ ಇಬ್ಬರು ಸಹಾಯಕರೂ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಬೌಲಿನಾ ಎಲ್ವಿವ್ ಮತ್ತು ಉಕ್ರೇನ್‌ನ ರಾಜಧಾನಿ ಕೈವ್‌ನಿಂದ ಸುದ್ದಿಗಳನ್ನು ವರದಿ ಮಾಡುತ್ತಿದ್ದರು. ಮಾಧ್ಯಮವು ಹೇಳಿಕೆಯನ್ನು ಬಿಡುಗಡೆ ಮಾಡಿದ ತಕ್ಷಣ, ಬೌಲಿನಾ ಅವರ ಸಹೋದ್ಯೋಗಿಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಅವರಿಗೆ ಸಂತಾಪ ಸೂಚಿಸಿದ್ದಾರೆ.