ಕಾಸರಗೋಡು: ಬಿಜೆಪಿ ಅಧೀನ ಸಂಘಟನೆ ಬಿಎಂಎಸ್ ಹೊರತುಪಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಆಹ್ವಾನ ನೀಡಿರುವ 48ತಾಸುಗಳ ರಾಷ್ಟ್ರೀಯ ಮುಷ್ಕರದಲ್ಲಿ ಕೇರಳದ ನಾನಾ ಕಡೆ ವ್ಯಾಪಕ ಅಕ್ರಮ ನಡೆದಿದೆ. ಹರತಾಳ ಬೆಂಬಲಿಗರು ವಾಹನ ಸಂಚಾರಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಚಾಲಕರು ಹಾಗೂ ಅಂಗಡಿ ಮುಚ್ಚುಗಡೆಗೊಳಿಸುವ ಸಂದರ್ಭ ವ್ಯಾಪಾರಿಗಳ ಮೇಲೂ ಹಲ್ಲೆ ನಡೆಸಿದ ಪ್ರಕರಣ ನಡೆದಿದೆ. ಕಾಸರಗೋಡು ನಗರದ ವಿವಿಧೆಡೆ ದ್ವಿಚಕ್ರ ವಾಹನ ಸವಾರರ ಕೊರಳಪಟ್ಟಿಹಿಡಿದು ಬೆದರಿಸಿ ವಾಪಾಸು ಕಳುಹಿಸಿದ ಘಟನೆಯೂ ನಡೆಯಿತು.
ಕೊಚ್ಚಿ ಕೋದಮಂಗಲದಲ್ಲಿ ಪಂಚಾಯಿತಿ ಕಚೇರಿ ತೆರೆದ ಕಾರ್ಯದರ್ಶಿಯ ಮೇಲೆ ಹರತಾಳ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಾರ್ಯದರ್ಶಿ ಕೆ. ಮನೋಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂಚಾಯಿತಿ ಕಾರ್ಯದರ್ಶಿಯನ್ನು ರಕ್ಷಿಸಲು ಆಗಮಿಸಿದ ಬಿಜೆಪಿ ಕಾರ್ಯಕರ್ತರ ಮೇಲೂ ಹಲ್ಲೆ ನಡೆಸಲಾಗಿದೆ. ಒಬ್ಬ ಪೊಲೀಸ್ ಕಾನ್‍ಸ್ಟೇಬಲ್‍ಗೂ ಗಾಯವುಂಟಾಗಿದೆ.
ಕಾಸರಗೋಡು ನಗರದಲ್ಲಿ ಹರತಾಳ ಬೆಂಬಲಿಗ ಸಂಘಟನೆಗಳ ಮುಖಮಡರು, ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.