ಕಾಸರಗೋಡು: ಜಿಲ್ಲೆಯ ಎಲ್ಲಾ ಖಾಸಗಿ ಬಸ್‍ಗಳಿಗೆ ಅನ್ವಯ ವಾಗುವ ರೀತಿಯಲ್ಲಿ ಕ್ಯಾಶ್‍ಲೆಸ್ ಟಿಕೆಟ್ ವ್ಯವಸ್ಥೆ 'ಚಲೋಕಾರ್ಡು' ಸೇವೆ ಮಾ 3ರಿಂದ ಲಭ್ಯವಾಗಲಿರುವುದಾಗಿ 'ಚಲೋ'ದ.ಭಾರತ ಮುಖ್ಯಸ್ಥ ವಿಜಯ್ ಮೆನನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಚಲೋ ಟ್ರಾವೆಲ್ ಕಾರ್ಡಿನೊಂದಿಗೆ ಕಾಸರಗೋಡಿನಲ್ಲಿ ಇನ್ನು ಮುಂದೆ ಕ್ಯಾಶ್‍ಲೆಸ್ ಟಿಕೆಟಿಂಗ್ ಸೇವೆ ಸಾಧ್ಯವಾಗಲಿದ್ದು, ಜಿಲ್ಲೆಯ ನೂರಕ್ಕೂ ಹೆಚ್ಚು ಬಸ್‍ಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಟ್ಯಾಪ್ ಟು ಪೇ ಕಾರ್ಡಿನ ಅಧಿಕೃತ ಲೋಕಾರ್ಪಣೆ ಕಾರ್ಯಕ್ರಮ ಮಾ 3ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆಯಲಿದೆ. ಚಲೋ ಕಾರ್ಡು ಬಳಸುವವರಿಗೆ ಶೇ.10ರ ರಿಯಾಯಿತಿಯೂ ಲಭ್ಯವಗಲಿದೆ.
ಚಲೋಕಾರ್ಡು ಬಳಸುವವರಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್‍ಗಳಿಗೆ ಸ್ಟಿಕ್ಕರ್‍ಗಳನ್ನು ಲಗತ್ತಿಸಲಾಗುತ್ತದೆ. ಒಂದು ಬಾರಿ 30ರೂ. ಪಾವತಿಸಿ ಚಲೋ ಕಾರ್ಡು ಪಡೆದುಕೊಂಡು, ಇದಕ್ಕೆ ಹಣ ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಯಾವುದೇ ರೂಟ್‍ಗಳಲ್ಲೂ ಸಂಚರಿಸಬಹುದಾಗಿದೆ. ಪ್ರತಿ ಪ್ರಯಾಣದ ನಂತರ ತಮ್ಮ ಕಾರ್ಡಿನಲ್ಲಿ ಕಡಿತಗೊಂಡ ಮೊತ್ತ ಹಾಗೂ ಬಾಕಿಯಿರುವ ಮೊತ್ತ ನಮೂದಾಗಿ ಟಿಕೆಟ್ ಲಭ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಮಾಸಿಕ ಪ್ರಯಾಣ ಪಾಸ್ ಸೇರಿದಂತೆ ಜನಸಾಮಾನ್ಯರಿಗೂ ಹೆಚ್ಚಿನ ಪ್ರಯೋಜನವಾಗಲಿದೆ. ಒಂದು ಬಾರಿಗೆ ಹತ್ತು ರೂ.ನಿಂದ 3ಸಾವಿರ ರೂ. ವರೆಗೂ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಆಯಾ ಬಸ್ಗಳ ನಿರ್ವಾಹಕರಲ್ಲಿ ಈ ಕಾರ್ಡು ಪಡೆದುಕೊಳ್ಳಬಹುದಾಗಿದೆ.
ಚಲೋ ಕಾರ್ಡು ವ್ಯವಸ್ಥೆ 37ನಗರಗಳಲ್ಲಿ ಚಟುವಟಿಕೆ ನಡೆಸುತ್ತಿದ್ದು, ದೇಶದ ಪ್ರಮುಖ ಬಸ್ ಸರಿಗೆ ತಂತ್ರಜ್ಞಾನ ಕಂಪೆನಿಯಾಗಿದೆ. ಪ್ರಯಾಣ ವ್ಯವಸ್ಥೆ ಉತ್ತಮಪಡಿಸುವುದರ ಜತೆಗೆ ಅನುಕೂಲವನ್ನೂ ಕಲ್ಪಿಸಲಿದೆ.ಕೇರಳದಲ್ಲಿ ಕಾಸರಗೋಡು ಸೇರಿದಂತೆ ಕೊಚ್ಚಿ, ಕೊಲ್ಲಂ, ಕೊಟ್ಟಾಯಂ, ಪಾಲಕ್ಕಾಡ್, ಇಡುಕ್ಕಿ, ತೃಶ್ಯೂರ್ ಜಿಲ್ಲೆಗಳಲ್ಲಿ ತನ್ನ ಸೇವೆ ನಡೆಸುತ್ತಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಸರಗೋಡು ಜಿಲ್ಲಾ ಖಾಸಗಿ ಬಸ್ ಓಪರೇಟರ್ಸ್ ಫೆಡರೇಶನ್ ಅಧ್ಯಕ್ಷ ಕೆ.ಗಿರೀಶ್, ಮನು ನಾಯರ್ ಉಪಸ್ಥಿತರಿದ್ದರು.