ನವದೆಹಲಿ: ರಾಜ್ಯಸಭೆ ಭಾರತದ ಸಂಸತ್ತಿನ ಮೇಲ್ಮನೆಯಾಗಿದೆ. ಸದಸ್ಯತ್ವವು 250 ಸದಸ್ಯರಿಗೆ ಸೀಮಿತವಾಗಿದ್ದು, ಪ್ರಸ್ತುತ ರಾಜ್ಯಸಭೆಯು 245 ಸದಸ್ಯರನ್ನು ಹೊಂದಿದೆ. 233 ಸದಸ್ಯರನ್ನು ವಿಧಾನಸಭಾ ಸದಸ್ಯರು ಆಯ್ಕೆ ಮಾಡುತ್ತಾರೆ. ಇನ್ನುಳಿದ 12 ಜನರನ್ನು ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಾಮಾಜಿಕ ಸೇವೆಗಳಿಗೆ ನೀಡಿದ ಕೊಡುಗೆಗಳಿಗಾಗಿ ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ. ಸದಸ್ಯರು ಆರು ವರ್ಷಗಳ ಅವಧಿಗೆ ಅಧಿಕಾರ ಹೊಂದಿದ್ದು, ಮೂರನೇ ಒಂದು ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ.
ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಪಡೆಯುವುದು ಸದ್ಯ ಬಿಜೆಪಿಗೆ ಕಷ್ಟದ ಸಮಯ. ರಾಜ್ಯಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಪ್ರಸ್ತುತ 114 ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ ಬಿಜೆಪಿ 97, ಜೆಡಿಯು 5, ಎಐಡಿಎಂಕೆ 5, ಸ್ವತಂತ್ರ 1 ಮತ್ತು ಸಣ್ಣ ಪಕ್ಷಗಳು 6 ಸ್ಥಾನಗಳನ್ನು ಹೊಂದಿವೆ. ಆದರೆ ಶೀಘ್ರದಲ್ಲೇ ಪರಿಸ್ಥಿತಿ ಬದಲಾಗಲಿದ್ದು, ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 70 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಬಿಜೆಪಿ ಸದಸ್ಯರ ಸಂಖ್ಯೆ 107ಕ್ಕೆ ಇಳಿಯಲಿದೆ:
ಸದ್ಯ ಇರುವ ರಾಜ್ಯಸಭಾ ಸದಸ್ಯರಲ್ಲಿ ಬಿಜೆಪಿಗೆ 5, ಎಐಎಡಿಎಂಕೆಗೆ 1 ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ 1 ಸ್ಥಾನ ಕಡಿಮೆಯಾಗಲಿದೆ. ಮೇಲ್ಮನೆಯಲ್ಲಿನ ಬಿಜೆಪಿಯ ಸದಸ್ಯರ ಸಂಖ್ಯೆ ಕುಸಿತದ ಬಳಿಕ, 114 ರಿಂದ 107ಕ್ಕೆ ಇಳಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಮಿತ್ರಪಕ್ಷಗಳ ಪ್ರತಿರೋಧ ಹಾಗೂ ಬಿಜೆಡಿ, ವೈಎಸ್‌ಆರ್ ಕಾಂಗ್ರೆಸ್ ಬೆಂಬಲ ದೊರೆಯದಿದ್ದರೆ ಬಿಜೆಪಿಗೆ ರಾಜ್ಯಸಭೆಯಲ್ಲಿ ಯಾವುದೇ ಮಸೂದೆ ಅಂಗೀಕರಿಸುವುದು ಕಷ್ಟವಾಗಲಿದೆ.
ಇದಲ್ಲದೆ ಸದ್ಯ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳ ಪೈಕಿ ಪಂಜಾಬ್, ಉತ್ತರಾಖಂಡ ಮತ್ತು ಯುಪಿಯಲ್ಲಿ ಸ್ಥಾನಗಳು ಕಡಿಮೆಯಾದರೆ, ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಸಂಖ್ಯೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಏಕೆಂದರೆ ಈ ರಾಜ್ಯಗಳು 19 ರಾಜ್ಯಸಭಾ ಸ್ಥಾನಗಳನ್ನು ಹೊಂದಿವೆ. ಮಾರ್ಚ್ 10ರ ನಂತರ ಚುನಾವಣೆ ಫಲಿತಾಂಶ ಬರಲಿದ್ದು, ಬಳಿಕ ಇಲ್ಲಿನ ಚಿತ್ರಣ ಸ್ಪಷ್ಟವಾಗಲಿದೆ.
ಸುಬ್ರಮಣಿಯನ್ ಸ್ವಾಮಿಗೆ ಬಿಜೆಪಿಯಿಂದ ಗೇಟ್ ಪಾಸ್?
ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವನ್ನು ಒಂದು ಮತದಿಂದ ಕೆಡವಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಸುಬ್ರಮಣಿಯನ್ ಸ್ವಾಮಿ ರಾಜ್ಯಸಭೆಯನ್ನೂ ತೊರೆಯಲಿದ್ದಾರೆ. ಇದರೊಂದಿಗೆ ಬಿಜೆಪಿಯಿಂದ ಅವರು ದೂರವಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕೇಂದ್ರ ಸರ್ಕಾರದ ವಿರುದ್ಧ ಸುದೀರ್ಘ ವಾಗ್ದಾಳಿ ನಡೆಸುತ್ತಿರುವ ಸುಬ್ರಮಣಿಯನ್ ಸ್ವಾಮಿ ಅವರ ಅಧಿಕಾರಾವಧಿ ಏಪ್ರಿಲ್ 24 ರಂದು ರಾಜ್ಯಸಭೆಯಿಂದ ಕೊನೆಗೊಳ್ಳಲಿದೆ. ಈ ಹಿಂದೆ ಅವರು ಸರ್ಕಾರವನ್ನು ಟಾರ್ಗೆಟ್ ಮಾಡಿದ ರೀತಿಯನ್ನು ನೋಡಿದ್ರೆ ಪುನರಾಯ್ಕೆಯಾಗುವ ಸಾಧ್ಯತೆಗಳು ನಗಣ್ಯ. ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಅವರನ್ನು ಈಗ ನಾಮನಿರ್ದೇಶನ ಮಾಡುವುದಿಲ್ಲ ಅಥವಾ ಬೇರೆ ಯಾವುದೇ ರಾಜ್ಯದಿಂದ ರಾಜ್ಯಸಭೆಗೆ ಪುನರ್ ಆಯ್ಕೆ ಮಾಡುವುದಿಲ್ಲ ಎಂದು ತಿಳಿಸಿವೆ.
ಬಿಜೆಪಿ ಜತೆಗೆ ಕಾಂಗ್ರೆಸ್‌ನ ಹಲವು ದಿಗ್ಗಜರ ಅಧಿಕಾರಾವಧಿಯೂ ರಾಜ್ಯಸಭೆಯಿಂದ ಪೂರ್ಣಗೊಳ್ಳಲಿದೆ. ಇದರಲ್ಲಿ ಆನಂದ್ ಶರ್ಮಾ, ಕಪಿಲ್ ಸಿಬಲ್, ಕೇರಳದ ಎಕೆ ಆಂಟನಿ ಮತ್ತು ಪಂಜಾಬ್‌ನಿಂದ ಅಂಬಿಕಾ ಸೋನಿಯೂ ಸಹ ಇದ್ದಾರೆ. ಪಂಜಾಬ್ ನಿಂದ ರಾಜ್ಯಸಭಾ ಸದಸ್ಯರಾಗಿರುವ ಪ್ರತಾಪ್ ಸಿಂಗ್ ಬಾಜ್ವಾ ಅವರ ಅವಧಿಯೂ ಮುಕ್ತಾಯವಾಗುತ್ತಿದೆ. ಈ ನಾಯಕರು ಮತ್ತೆ ನಾಮನಿರ್ದೇಶನಗೊಳ್ಳುವ ಸಾಧ್ಯತೆಯೂ ಇಲ್ಲ. ಇದಕ್ಕೆ ಹಲವು ಕಾರಣಗಳಿವೆ.