ಅಹ್ಮದಾಬಾದ್: ಗ್ರಾಮ ಸ್ವರಾಜ್ಯ ಕನಸನ್ನು ನನಸಾಗಿಸುವಲ್ಲಿ ಪಂಚಾಯತ ರಾಜ್ ವ್ಯವಸ್ಥೆಯು ತುಂಬ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಇಲ್ಲಿ ಹೇಳಿದರು. ಜಿಎಂಡಿಸಿ ಮೈದಾನದಲ್ಲಿ ಮಹಾ-ಪಂಚಾಯತ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ''ಗುಜರಾತ್ ಬಾಪು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಾಡಾಗಿದೆ.
ಬಾಪು ಸದಾ ಗ್ರಾಮೀಣಾಭಿವೃದ್ಧಿ,ಸ್ವಾವಲಂಬಿ ಗ್ರಾಮಗಳ ಬಗ್ಗೆ ಮಾತನಾಡುತ್ತಿದ್ದರು. ನಾವು 'ಅಮೃತ ಮಹೋತ್ಸವ'ವನ್ನು ಆಚರಿಸುತ್ತಿರುವ ಈ ಸಮಯದಲ್ಲಿ ಗ್ರಾಮೀಣ ವಿಕಾಸದ ಬಾಪುರ ಕನಸನ್ನು ನಾವು ನನಸಾಗಿಸಬೇಕು' ಎಂದರು.
ಗ್ರಾಮ ಸ್ವರಾಜ್ಯ ಕನಸನ್ನು ನನಸಾಗಿಸುವಲ್ಲಿ ಪಂಚಾಯತ ರಾಜ್ ವ್ಯವಸ್ಥೆಯು ಬಹು ಮುಖ್ಯವಾಗಿದೆ. ಈ ವ್ಯವಸ್ಥೆಗೆ ದಿಕ್ಕು ಮತ್ತು ವೇಗವನ್ನು ನೀಡುವ ಕೆಲಸವನ್ನು ನೀವೆಲ್ಲ ಜನಪ್ರತಿನಿಧಿಗಳು, ಪಂಚರು-ಸರಪಂಚರು ಮಾಡುತ್ತಿದ್ದೀರಿ ಎಂದರು.
ಗುಜರಾತಿನಲ್ಲಿ ಪಂಚಾಯತ ವ್ಯವಸ್ಥೆಯಲ್ಲಿ ಪುರುಷರಿಗಿಂತ ಹೆಚ್ಚು ಮಹಿಳಾ ಜನಪ್ರತಿನಿಧಿಗಳಿದ್ದಾರೆ ಎಂದ ಮೋದಿ,ಒಂದೂವರೆ ಲಕ್ಷಕ್ಕೂ ಅಧಿಕ ಚುನಾಯಿತ ಜನಪ್ರತಿನಿಧಿಗಳು ಒಂದಾಗಿ ಕುಳಿತು ಗುಜರಾತಿನ ಉಜ್ವಲ ಭವಿಷ್ಯದ ಬಗ್ಗೆ ಚರ್ಚಿಸಬೇಕು. ಇದಕ್ಕಿಂತ ಮಹಾನ್ ಅವಕಾಶ ಇನ್ನೊಂದಿಲ್ಲ. ಇದಕ್ಕಿಂತ ಹೆಚ್ಚಿನ ಪ್ರಜಾಸತ್ತಾತ್ಮಕ ಅಧಿಕಾರ ಬೇರೊಂದಿಲ್ಲ ಎಂದರು.
ಶಿಷ್ಟಾಚಾರಗಳ ಪಾಲನೆಯೊಂದಿಗೆ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಗ್ರಾಮ ಪ್ರತಿನಿಧಿಗಳ ಪ್ರಯತ್ನಗಳಿಗಾಗಿ ಅವರನ್ನು ಪ್ರಧಾನಿ ಅಭಿನಂದಿಸಿದರು.
ಶನಿವಾರ ಪೂರ್ವಾಹ್ನ 11 ಗಂಟೆಗೆ ಮೋದಿ ರಾಷ್ಟ್ರೀಯ ರಕ್ಷಾ ವಿವಿಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವಿವಿಯ ಮೊದಲ ಘಟಕೋತ್ಸವ ಭಾಷಣವನ್ನೂ ಅವರು ಮಾಡಲಿದ್ದಾರೆ. ಸಂಜೆ 6:30ರ ಸುಮಾರಿಗೆ ಖೇಲ್ ಮಹಾಕುಂಭಕ್ಕೂ ಅವರು ಚಾಲನೆ ನೀಡಲಿದ್ದಾರೆ.