ಮುಳ್ಳೇರಿಯ: ನೆಕ್ರಾಜೆ ಸಂತಾನ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಸಸಿ ತುಳಸಿಗಳ ಸಾಮೂಹಿಕ ನೆಡುವಿಕೆ ಮತ್ತು ಚಪ್ಪರ ಮುಹೂರ್ತ ಜರುಗಿತು.
ದೇವಾಲಯದಲ್ಲಿ ಮೇ 7 ರಿಂದ 15 ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆಯುವ ಪೂರ್ವಭಾವಿ ಚಟುವಟಿಕೆಗಳ ಸಲುವಾಗಿ ಈ ಸಮಾರಂಭಗಳು ನಡೆದುವು. ಈ ಸಂಬಂಧ ಜರುಗಿದ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಸ್.ಎನ್.ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಡಾ.ಶ್ರೀನಿಧಿ ಶರಳಾಯ ಬದಿಯಡ್ಕ, ನುಳ್ಳಿಪ್ಪಾಡಿಯ ಸೀತ್ಮ ಪುರುಷ ನಾಯಕ ಸ್ಮಾರಕ ಗ್ರಂಥಾಲಯ ಮತ್ತು ಕನ್ನಡ ಭವನದ ಸಂಸ್ಥಾಪಕ ವಾಮನರಾವ್ ಬೇಕಲ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದಿಯಡ್ಕ ವಲಯ ಅಧ್ಯಕ್ಷ ದಿನೇಶ್ ಮುಖ್ಯ ಅತಿಥಿಯಾಗಿದ್ದರು. ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗಣೇಶ ವತ್ಸ, ಸುಮಾ ಗಣೇಶ ವತ್ಸ ಇದ್ದರು. ಬಾಲಕೃಷ್ಣ ಪೂಜಾರಿ ಸ್ವಾಗತಿಸಿದರು. ಕುಶಲ ಯಾದವ್ ನೆಕ್ರಾಜೆ ವಂದಿಸಿದರು.
ಗಣ್ಯರು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಕುಟುಂಬಶ್ರೀ, ಉದ್ಯೋಗ ಖಾತರಿ ಯೋಜನೆ ಕಾರ್ಯಕರ್ತರು, ಸ್ಥಳೀಯ ಸಂಘ-ಸಂಸ್ಥೆಗಳ ಸದಸ್ಯರು, ದೇವಾಲಯದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ತುಳಸಿ ಸಸಿ ನೆಡುವಿಕೆ ಮತ್ತು ಚಪ್ಪರಕ್ಕಾಗಿ ತೆಂಗಿನ ಮರದ ಗರಿ ಹೆಣೆಯುವ ಕಾಯಕ ನಡೆಸಿದರು.