ನವದೆಹಲಿ : ಭಾರತವು ವಿಶ್ವಸಂಸ್ಥೆಯಲ್ಲಿ ತಳೆದ ನಿಲುವಿನಿಂದ ಅತ್ಯಂತ ನಿರಾಶೆಯಾಗಿದ್ದು ರಶ್ಯಾ ಪರ ವಹಿಸಬಾರದು ಎಂದು ಅಮೆರಿಕದ ಸಂಸದರು ಭಾರತವನ್ನು ಆಗ್ರಹಿಸಿದ್ದಾರೆ.
ಉಕ್ರೇನ್ ಮೇಲಿನ ರಶ್ಯಾದ ಆಕ್ರಮಣವನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿರುವುದನ್ನು ಅಮೆರಿಕದ ರಿಪಬ್ಲಿಕನ್ ಮತ್ತು ಡೆಮೊಕ್ರಾಟ್ಸ್ ಸಂಸದರು ಖಂಡಿಸಿದ್ದಾರೆ.
ರಶ್ಯಾದ ಬ್ಯಾಂಕ್ಗಳ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧದಿಂದಾಗಿ ರಶ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಲು ಇತರ ದೇಶಗಳಿಗೆ ಸಮಸ್ಯೆಯಾಗಲಿದೆ ಎಂದು ಅಮೆರಿಕದ ರಾಜತಾಂತ್ರಿಕರು ಹೇಳಿದ್ದಾರೆ. ನಿರ್ಬಂಧ ಜಾರಿಗೂ ಮುನ್ನ ಭಾರತವು ರಶ್ಯಾದೊಂದಿಗೆ ಕ್ಷಿಪಣಿ ಖರೀದಿಗೆ ಮಾಡಿಕೊಂಡಿರುವ ಒಪ್ಪಂದದಿಂದ ವಿನಾಯಿತಿ ನೀಡುವ ಬಗ್ಗೆ ಇದುವರೆಗೆ ಅಮೆರಿಕ ಆಡಳಿತ ನಿರ್ಧರಿಸಿಲ್ಲ ಎಂದವರು ಹೇಳಿದ್ದಾರೆ.
ಈ ಮಧ್ಯೆ, ಭಾರತದ ವಿರುದ್ಧದ ನಿರ್ಬಂಧಗಳನ್ನು ಮನ್ನಾ ಮಾಡುವ ನಿರ್ಧಾರವನ್ನು ಅಮೆರಿಕ ಮರುಪರಿಶೀಲಿಸಬಹುದು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಹೇಳಿದ್ದಾರೆ. ರಶ್ಯಾದಿಂದ ಎಸ್-400 ಕ್ಷಿಪಣಿ ಖರೀದಿಸುವ 5.43 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ 2018ರಲ್ಲಿ ಭಾರತ ಸಹಿ ಹಾಕಿತ್ತು. ಆದರೆ ಭಾರತದ ವಿರುದ್ಧ ಸಿಎಎಟಿಎಸ್‌ಎ (ನಿರ್ಬಂಧದ ಕಾಯ್ದೆಯ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವುದು) ಕಾಯ್ದೆಯನ್ನು ವಿಧಿಸುವುದರಿಂದ ಆಗ ಅಮೆರಿಕ ಹಿಂದೆ ಸರಿದಿತ್ತು.
ಇದೀಗ ವಿಶ್ವಸಂಸ್ಥೆಯಲ್ಲಿ ರಶ್ಯಾದ ಪರ ನಿಂತಿರುವ ಭಾರತದ ವಿರುದ್ಧ ಮತ್ತೆ ಸಿಎಎಟಿಎಸ್‌ಎ ಕಾಯ್ದೆ ಜಾರಿಯಾಗುವುದೇ ಎಂದು ಅಮೆರಿಕದ ಸಂಸದ ಕ್ರಿಸ್ವಾನ್ ಹಾಲನ್ ಪ್ರಶ್ನಿಸಿದ್ದರು. ಮನ್ನಾ ಅಥವಾ ಜಾರಿಯ ವಿಷಯದಲ್ಲಿ ಅಧ್ಯಕ್ಷರು ಅಥವಾ ಕಾರ್ಯದರ್ಶಿಯ ನಿರ್ಧಾರವನ್ನು ನಾವು ಪೂರ್ವಭಾವಿಯಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅಥವಾ ಉಕ್ರೇನ್ ಮೇಲಿನ ರಶ್ಯಾದ ಆಕ್ರಮಣಕ್ಕೆ ಈ ನಿರ್ಧಾರ ಸಂಬಂಧಿಸಿದೆಯೇ ಎಂಬುದನ್ನೂ ಹೇಳಲಾಗದು. ಭಾರತ ಈಗ ನಮ್ಮ ಅತ್ಯಂತ ಮಹತ್ವದ ಭದ್ರತಾ ಸಹಭಾಗಿ ದೇಶವಾಗಿದೆ ಎಂದಷ್ಟೇ ಹೇಳಬಹುದು. ಈಗ ರಶ್ಯಾಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎದುರಾಗಿರುವ ತೀವ್ರ ಟೀಕೆಯನ್ನು ಮನಗಂಡು ಆ ದೇಶದಿಂದ ದೂರ ನಿಲ್ಲುವ ನಿರ್ಧಾರಕ್ಕೆ ಈಗ ಸಕಾಲ ಎಂದು ಭಾರತ ಭಾವಿಸಲಿದೆ ಎಂದಷ್ಟೇ ಆಶಿಸುತ್ತೇನೆ ಎಂದು ಡೊನಾಲ್ಡ್ ಲು ಹೇಳಿದ್ದಾರೆ.
ಭಾರತ ಈಗಾಗಲೇ ಮಿಗ್-29 ಸಹಿತ ರಶ್ಯಾದೊಂದಿಗಿನ ಹಲವು ಒಪ್ಪಂದಗಳನ್ನು ರದ್ದು ಮಾಡಿದೆ . ರಶ್ಯಾದ ಪರ ಭಾರತ ನಿಲ್ಲುವುದಿಲ್ಲ ಮತ್ತು ಉಕ್ರೇನ್ ಆಕ್ರಮಣದ ಹಿನ್ನೆಲೆಯಲ್ಲಿ ಆ ದೇಶವನ್ನು ಖಂಡಿಸುವ ಸಾಮೂಹಿಕ ಹೊಣೆಗಾರಿಕೆಗೆ ಭಾರತ ಬದ್ಧವಾಗಲಿದೆ ಎಂದು ಬೈಡನ್ ಆಡಳಿತ ಆಶಿಸುತ್ತದೆ ಎಂದವರು ಹೇಳಿದ್ದಾರೆ.
ಹಿಂಸಾಚಾರವನ್ನು ಅಂತ್ಯಗೊಳಿಸಲು ಭಾರತ ಆಗ್ರಹಿಸಿದ್ದರೂ, ರಶ್ಯಾದ ಆಕ್ರಮಣವನ್ನು ಇದುವರೆಗೆ ಖಂಡಿಸದ ಅಮೆರಿಕದ ಏಕೈಕ ಪ್ರಮುಖ ಮಿತ್ರರಾಷ್ಟ್ರವಾಗಿದೆ. ಭಾರತ ಒಂದು ಸ್ಪಷ್ಟ ನಿಲುವು ತಳೆಯುವಂತೆ, ರಶ್ಯಾದ ಆಕ್ರಮಣವನ್ನು ವಿರೋಧಿಸುವ ನಿಲುವು ತಳೆಯುವಂತೆ ನಾವೆಲ್ಲಾ ಆಗ್ರಹಿಸಲಿದ್ದೇವೆ ಎಂದವರು ಸಂಸತ್ ಸಮಿತಿಗೆ ತಿಳಿಸಿದ್ದಾರೆ. ಭಾರತದ ನಿಲುವಿಗೆ ಸಂಸದರು ತೀವ್ರ ವಿರೋಧ ಮತ್ತು ನಿರಾಶೆ ವ್ಯಕ್ತಪಡಿಸಿದ್ದು ವಿಶ್ವದ ಬೃಹತ್ ಪ್ರಜಾಪ್ರಭುತ್ವ ದೇಶವಾಗಿರುವ ಭಾರತ, ಉಕ್ರೇನ್ ಮೇಲಿನ ಆಕ್ರಮಣ ಖಂಡಿಸುವಲ್ಲಿ ಇತರ ಪ್ರಜಾಸತ್ತಾತ್ಮಕ ದೇಶಗಳೊಂದಿಗೆ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.