ನವದೆಹಲಿ: ವಿದ್ಯುನ್ಮಾನ ಮತ ಯಂತ್ರ(EVM) ಬಗ್ಗೆ ಸಮಾಜವಾದಿ ಪಕ್ಷದ ನಾಯಕರು ಮಾಡಿರುವ ಆರೋಪಕ್ಕೆ ಉತ್ತರಿಸಿರುವ ಮುಖ್ಯ ಚುನಾವಣಾ ಆಯುಕ್ತ ಸುಶಿಲ್ ಚಂದ್ರ, ಚುನಾವಣಾ ಆಯೋಗ ಯಾವತ್ತಿಗೂ ಪಾರದರ್ಶಕತೆ ಕಾಪಾಡಿಕೊಂಡು ಬಂದಿರುವುದರಿಂದ ಇವಿಎಂನ್ನು ತಿರುಚುವ ಪ್ರಶ್ನೆಯೇ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ವಿದ್ಯುನ್ಮಾನ ಮತ ಯಂತ್ರಗಳನ್ನು ತರಬೇತಿ ಉದ್ದೇಶಕ್ಕೆ ತೆಗೆದುಕೊಂಡು ಹೋಗುವಾಗ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವ ಕ್ರಮವನ್ನು ಪಾಲಿಸಿಲ್ಲ ಎಂದು ವಾರಣಾಸಿಯ ಎಡಿಎಂನ್ನು ವಜಾಗೊಳಿಸಿ ಉತ್ತರ ಪ್ರದೇಶ ಮುಖ್ಯ ಚುನಾವಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಸುಶಿಲ್ ಚಂದ್ರ ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇವಿಎಂನ್ನು ತಿರುಚುವ ಪ್ರಶ್ನೆಯೇ ಇಲ್ಲ. 2004ರಿಂದ ಇವಿಎಂನ್ನು ಸತತವಾಗಿ ಚುನಾವಣೆಗಳಲ್ಲಿ ಬಳಸಿಕೊಂಡು ಬರಲಾಗಿದೆ. 2019ರ ಹೊತ್ತಿಗೆ ನಾವು ವಿವಿಪ್ಯಾಟ್ ಗಳನ್ನು ಪ್ರತಿ ಮತ ಕೇಂದ್ರಗಳಲ್ಲಿ ನಿರ್ವಹಿಸಲು ಆರಂಭಿಸಿದೆವು. ರಾಜಕೀಯ ಪಕ್ಷಗಳ ನಾಯಕರ ಸಮ್ಮುಖದಲ್ಲಿಯೇ ಇವಿಎಂಗಳನ್ನು ಸೀಲ್ ಮಾಡಲಾಗುತ್ತದೆ. ಅವರ ಸಹಿಗಳನ್ನು ಕೂಡ ಪಡೆಯಲಾಗುತ್ತದೆ. ಮೂರು ಪದರದ ಭದ್ರತೆಯೊಂದಿಗೆ ಇವಿಎಂಗಳನ್ನು ಸ್ಟ್ರಾಂಗ್ ರೂಂಗಳಲ್ಲಿ ಇರಿಸಲಾಗುತ್ತದೆ. ದಿನಪೂರ್ತಿ ರಾತ್ರಿ-ಹಗಲು ಸ್ಟ್ರಾಂಗ್ ರೂಂಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಇರಿಸಲಾಗುತ್ತದೆ. ಸ್ಟ್ರಾಂಗ್ ರೂಂಗಳ ಮೇಲೆ ರಾಜಕೀಯ ಪಕ್ಷಗಳ ನಾಯಕರು ಸೂಕ್ಷ್ಮ ಗಮನವನ್ನಿರಿಸುತ್ತಾರೆ. ಹೀಗಾಗಿ ವಿದ್ಯುನ್ಮಾನ ಮತ ಕೇಂದ್ರಗಳನ್ನು ತಿರುಚುವ ಮತ್ತು ಇವಿಎಂಗಳನ್ನು ಸ್ಟ್ರಾಂಗ್ ರೂಂಗಳಿಂದ ಹೊರಗೆ ತೆಗೆದುಕೊಂಡು ಹೋಗುವ ಪ್ರಶ್ನೆಯೇ ಇಲ್ಲ ಎಂದರು.