ನವದೆಹಲಿ: ಹಿಜಾಬ್ ಕುರಿತಾಗಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ನ್ಯಾಯಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಮೊಹಮದ್ ರಹೀಂ, ಮುನೀಸಾ ಬುಸ್ರಾ, ಜೆಲಿಸಾ ಸುಲ್ತಾನಾ ಎನ್ನುವವರಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿರುವ 2ನೇ ಅರ್ಜಿ ಇದಾಗಿದೆ.
ಇಸ್ಲಾಂನಲ್ಲಿ ಹಿಜಾಬ್ ಹೆಣ್ಣುಮಕ್ಕಳಿಗೆ ಅವಿಭಾಜ್ಯ ಅಂಗವಲ್ಲ. ಆ ಕಾರಣಕ್ಕಾಗಿ ಶಾಲೆಗೆ ಸರ್ಕಾರ ಸೂಚಿಸಿರುವ ಸಮವಸ್ತ್ರವೇ ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ನ್ಯಾಯ ಮಂಡಳಿ ((All India Muslim Personal Law Board) ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಕುರಾನ್ ಬಗ್ಗೆ ತಪ್ಪಾದ ವ್ಯಾಖ್ಯಾನ ಮಾಡಲಾಗಿದ್ದು, ಹದೀಸ್ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಇಸ್ಲಾಮಿಕ್ ಕಾನೂನುಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ. ಹಾಗಾಗಿ ಈ ಬಗ್ಗೆ ಸೂಕ್ತವಾದ ವಿಚಾರಣೆ ನಡೆಸಿ ಹೈಕೋರ್ಟ್ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದೆ.
ಇದಕ್ಕೂ ಮುನ್ನ ಕೇರಳದ ಮುಸ್ಲಿಂ ಸಂಘಟನೆಯೊಂದು ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಿತ್ತು. ಸಮಸ್ತ ಕೇರಳ ಜಮಾಯತ್ ಉಲ್ ಉಲಾಮಾ ಸಂಘಟನೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಕುರಾನ್ ನಲ್ಲಿ ಮಹಿಳೆಯು ಕುತ್ತಿಗೆ, ತಲೆ ಮುಚ್ಚಿಕೊಳ್ಳುವುದು ಕಡ್ಡಾಯ ಎಂದು ಹೇಳಿದೆ ಎಂದು ಕೇರಳದ ಸಂಘಟನೆ ಅರ್ಜಿಯಲ್ಲಿ ತಿಳಿಸಿದೆ.