ತಿರುವನಂತಪುರ: ಬಸ್‌ಗಳಲ್ಲಿ ಸಂಚರಿಸುವಾಗ ಮಹಿಳೆಯರ ಅಂಗಾಂಗಗಳನ್ನು ಮುಟ್ಟಿ ಖುಷಿ ಪಡುವ ಕಾಮುಕರು ದಿನನಿತ್ಯವೂ ಕಾಣಸಿಗುತ್ತಾರೆ. ಎಷ್ಟೇ ತೊಂದರೆ, ಮುಜುಗರವಾದರೂ ಹೆಚ್ಚಿನ ಮಹಿಳೆಯರು ನಮಗೇಕೆ ಸಹವಾಸ ಎಂದುಕೊಂಡು ಸುಮ್ಮನಾಗಿಬಿಡುತ್ತಾರೆ.
ಆದರೆ ಕೇರಳದ ಕೋಯಿಕ್ಕೋಡಿನ ಮಹಿಳೆಯೊಬ್ಬರು ಹಾಗೆ ಮಾಡದೇ ಅದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದು ಇದೀಗ ಆರೋಪಿ ಜತೆ ಕಂಡಕ್ಟರ್‌ಗೂ ಗ್ರಹಚಾರ ಬಂದಿದೆ.
ಆಗಿದ್ದೇನೆಂದರೆ, ಕೋಯಿಕ್ಕೋಡ್‌ಗೆ ತೆರಳುತ್ತಿದ್ದ ಕೇರಳದ ಕೆಎಸ್ಆರ್ಟಿಸಿ ಬಸ್‌ನಲ್ಲಿ ಶನಿವಾರ ರಾತ್ರಿ ಸಂಚರಿಸುತ್ತಿದ್ದಾಗ ಶಿಕ್ಷಕಿಯೊಬ್ಬರಿಗೆ ಸಹ ಪ್ರಯಾಣಿಕ ಕಿರುಕುಳ ಕೊಟ್ಟಿದ್ದಾನೆ. ಶಿಕ್ಷಕಿ ಅದನ್ನು ಪ್ರತಿಭಟಿಸಿದ್ದಾರೆ. ಆದರೂ ಆತ ಕಿರುಕುಳ ಮುಂದುವರೆಸಿದ್ದಾನೆ. ಇದನ್ನು ಶಿಕ್ಷಕಿ ಕಂಡಕ್ಟರ್ ಗಮನಕ್ಕೆ ತಂದರೂ ಅವರು ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸದೇ ಸುಮ್ಮನಿದ್ದಾರೆ.
ಇದರಿಂದ ಕೆರಳಿದ ಶಿಕ್ಷಕಿ ಈ ಸಂಪೂರ್ಣ ಘಟನೆಯನ್ನು ವಿಡಿಯೋ ಮಾಡಿಕೊಂಡು, ನಡೆದದ್ದನ್ನೆಲ್ಲವನ್ನೂ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಸಾರಿಗೆ ಸಚಿವರಿಗೂ ಟ್ಯಾಗ್ ಮಾಡಿದ್ದಾರೆ. ವಿಡಿಯೋ ಮಾಡುತ್ತಿದ್ದುದು ತಿಳಿಯುತ್ತಿದ್ದಂತೆಯೇ ಕಾಮುಕ ಕ್ಷಮೆಯನ್ನೂ ಕೋರಿದ್ದಾನೆ, ಅದನ್ನೂ ಅವರು ಬರೆದುಕೊಂಡಿದ್ದಾರೆ.
ಈ ಫೇಸ್‌ಬುಕ್ ವಿಡಿಯೋ ಸಾರಿಗೆ ಸಚಿವ ಆಂಟನಿ ರಾಜು ಅವರ ಗಮನಕ್ಕೆ ಬರುತ್ತಿದ್ದಂತೆಯೇ ಅವರು ಸಿಟ್ಟಾಗಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಬಸ್‌ನಲ್ಲಿ ಮಹಿಳೆಯೊಂದಿಗೆ ನಡೆದ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪಿ ವಿರುದ್ಧ ಕ್ರಮ ಜರುಗಿಸಲಾಗುವುದು. ಜತೆಗೆ ಈ ಘಟನೆಯಲ್ಲಿ ಕಂಡಕ್ಟರ್ ತಪ್ಪು ಅಥವಾ ಬೇಜವಾಬ್ದಾರಿ ಕಂಡು ಬಂದರೂ ಆತನ ವಿರುದ್ಧವೂ ಸೂಕ್ತ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.