ನವದೆಹಲಿ: ರಾಜಧಾನಿಯ ಖಾನ್ ಮಾರ್ಕೆಟ್ ಬಳಿಯ 'ಸುಜನ್ ಸಿಂಗ್ ಪಾರ್ಕ್' ವಸತಿ ಸಂಕೀರ್ಣದಿಂದ ಸರ್ಕಾರಿ ಅಧಿಕಾರಿಗಳ ತೆರವಿಗೆ ಬೌನ್ಸರ್‌ಗಳನ್ನು ಕಳುಹಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠದ ಎದುರು ಈ ಮಾತು ಹೇಳಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, 'ಈ ಪ್ರಕರಣವನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು' ಎಂದು ಮನವಿ ಮಾಡಿದರು.
ಪೀಠವು ಇದಕ್ಕೆ , 'ಸರ್ಕಾರಿ ಅಧಿಕಾರಿಗಳನ್ನು ತೆರವುಗೊಳಿಸಲು ಯಾರಾದರೂ ಬೌನ್ಸರ್‌ಗಳನ್ನು ಕಳುಹಿಸಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿತು. ವಿಚಾರಣೆಯನ್ನು ಏಪ್ರಿಲ್ 5ಕ್ಕೆ ನಿಗದಿಪಡಿಸಿತು.
ಈ ಪ್ರಕರಣದಲ್ಲಿ, ಉಲ್ಲೇಖಿತ ಆಸ್ತಿಗೆ ಸಂಬಂಧಿಸಿ ಬಾಕಿ ಉಳಿದಿರುವ ಬಾಡಿಗೆ ಮೊತ್ತವನ್ನು ಪ್ರತಿವಾದಿ 'ಸರ್ ಶೋಭಾ ಸಿಂಗ್ ಅಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಗೆ ಪಾವತಿಸಬೇಕು ಎಂದು ಬಾಡಿಗೆ ನಿಯಂತ್ರಣ ನ್ಯಾಯಮಂಡಳಿಯು ಆದೇಶಿಸಿದ್ದು, ಹೈಕೋರ್ಟ್ ಇದನ್ನು ಎತ್ತಿಹಿಡಿದಿತ್ತು. ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರ 'ಸುಪ್ರೀಂ'ಗೆ ಮೇಲ್ಮನವಿ ಸಲ್ಲಿಸಿತ್ತು.
ಆಸ್ತಿಯನ್ನು ಶೋಭಾ ಸಿಂಗ್ ಅಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಅನುದಾನವಾಗಿ ನೀಡಲಾಗಿತ್ತು. ಹೆಸರಾಂತ ಗುತ್ತಿಗೆದಾರ, ದೆಹಲಿ ಅಭಿವೃದ್ಧಿಗೆ ಒತ್ತು ನೀಡಿರುವ ಶೋಭಾ ಸಿಂಗ್, ಹೆಸರಾಂತ ಪತ್ರಕರ್ತ ಖುಷವಂತ್ ಸಿಂಗ್ ಅವರ ತಂದೆ.
ಉತ್ತರ ಮತ್ತು ದಕ್ಷಿಣ ಸುಜನ್ ಸಿಂಗ್ ಪಾರ್ಕ್‌ನ ವಸತಿ ಫ್ಲಾಟ್‌ಗಳನ್ನು ರಿಯಾಯಿತಿ ದರದಲ್ಲಿ 1944ರಲ್ಲಿ ಸರ್ಕಾರಕ್ಕೆ ಬಾಡಿಗೆಗೆ ನೀಡಲಾಗಿತ್ತು. ಅನುದಾನ ಕಾಯ್ದೆಯಂತೆ 'ಅನುದಾನ' ರೂಪದಲ್ಲಿ ಸರ್ಕಾರದ ಆಸ್ತಿಯನ್ನು ನೀಡಿದ ಸಂದರ್ಭದಲ್ಲಿ, ಅದನ್ನು ಬೇರಾವುದೇ ಕಾಯ್ದೆ, ನಿಯಮದಡಿ ಪ್ರಶ್ನಿಸಲಾಗದು ಎಂದು ಸೆಕ್ಷನ್ 3ರಲ್ಲಿ ಸ್ಪಷ್ಟವಾಗಿದೆ ಎಂಬುದು ಕೇಂದ್ರ ಪ್ರತಿಪಾದಿಸಿತ್ತು.
ಬಾಡಿಗೆ ನಿಯಂತ್ರಣ ನ್ಯಾಯಮಂಡಳಿಯು ಸೆಪ್ಟೆಂಬರ್ 1, 2007ರ ಆದೇಶದಲ್ಲಿ ಉಲ್ಲೇಖಿಸಲಾದ ಆಸ್ತಿಯು ದೆಹಲಿ ಬಾಡಿಗೆ ನಿಯಂತ್ರಣ ಕಾಯ್ದೆ ವ್ಯಾಪ್ತಿಗೆ ಬರಲಿದೆ ಎಂದು ಹೇಳಿತ್ತು. ದೆಹಲಿ ಹೈಕೋರ್ಟ್ ಜ. 8, 2020ರಂದು ಇದನ್ನು ಎತ್ತಿಹಿಡಿದಿತ್ತು. 1989ರವರೆಗೂ ಬಾಡಿಗೆ ಪಾವತಿಸಲಾಗಿದೆ. ನಂತರದಲ್ಲಿ ಅನೇಕ ವ್ಯಾಜ್ಯಗಳು ಎದುರಾದವು ಎಂದು ಸರ್ಕಾರ ತಿಳಿಸಿತ್ತು.