ನವದೆಹಲಿ:ಕಾಶ್ಮೀರ ವಿಚಾರವನ್ನು ವಿಶ್ವ ಸಂಸ್ಥೆಯ ಬಳಿಗೊಯ್ದ ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಈ ವಿಚಾರವನ್ನು ಅಂತಾರಾಷ್ಟ್ರೀಕರಣಗೊಳಿಸಿದರು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. ಜಮ್ಮು ಕಾಶ್ಮೀರ ಬಜೆಟ್ ಕುರಿತಂತೆ ರಾಜ್ಯಸಭೆಯಲ್ಲಿನ ಚರ್ಚೆ ವೇಳೆ ಅವರು ಮೇಲಿನಂತೆ ಹೇಳಿದ್ದಾರೆ.
"ಈ ವಿಚಾರವು ಜಾಗತಿಕ ವೇದಿಕೆಗೆ ಹೋಗಬಾರದಾಗಿತ್ತು. ಇದು ಭಾರತದ ಸಮಸ್ಯೆ. ಇದನ್ನು ನಾವೇ ನಿಭಾಯಿಸಬಹುದಾಗಿತ್ತು. ನಾವು ಅದನ್ನು ನಿಭಾಯಿಸುತ್ತಿದ್ದೇವೆ ಹಾಗೂ ಬದಲಾವಣೆಯನ್ನು ಈಗ ತೋರಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಸಚಿವೆ, ಇಂದು ಕೂಡ ನೆರೆಯ ರಾಷ್ಟ್ರವನ್ನು ಕಾಶ್ಮೀರ ವಿಚಾರದ ಅಂತಾರಾಷ್ಟ್ರೀಕರಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಸಂವಿಧಾನದ 370ನೇ ವಿಧಿಯನ್ನು ರದ್ದಗೊಳಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಶೇ 61ರಷ್ಟು ಇಳಿಕೆ ಕಂಡಿವೆ ಎಂದು ಸೀತಾರಾಮನ್ ಹೇಳಿದರು. "ನುಸುಳುವಿಕೆ ಯತ್ನಗಳೂ ಶೇ 33ರಷ್ಟು ಕಡಿಮೆಯಾಗಿವೆ (2020ರಲ್ಲಿ 51 ಹಾಗೂ 2021ರಲ್ಲಿ 34), ಕದನ ವಿರಾಮ ಉಲ್ಲಂಘನೆಗಳು ಶೇ 90ರಷ್ಟು ಇಳಿಕೆಯಾಗಿವೆ (2020ರಲ್ಲಿ 937 ಹಾಗೂ 2021ರಲ್ಲಿ 98)" ಎಂದು ಸಚಿವೆ ವಿವರಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 2021ರಲ್ಲಿ 180 ಶಂಕಿತ ಉಗ್ರರು ಹತ್ಯೆಗೀಡಾದರೆ 2022ರಲ್ಲಿ ಇಲ್ಲಿಯ ತನಕ 38 ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.