ಕೊಚ್ಚಿ: ವಿವಾದದ ನಡುವೆಯೂ ಕೆಎಸ್‍ಆರ್‍ಟಿಸಿ ಕೆ.ಸ್ವಿಫ್ಟ್ ಲಾಭ ಗಳಿಸಿದೆ. ಆರಂಭಗೊಂಡ ಮೊದಲ 10 ದಿನಗಳಲ್ಲಿ 30 ಬಸ್‍ಗಳಿಂದ ಸ್ವಿಫ್ಟ್ 61 ಲಕ್ಷ ರೂಪಾಯಿ ಗಳಿಸಿದೆ. ಆದಾಯದಲ್ಲಿ ಸರಕಾರಕ್ಕೆ 61,71,908 ರೂ.ಲಭಿಸಿದೆ.
ಮೊದಲ ದಿನದ ಸೇವೆಯಲ್ಲಿ 1,26,818 ಕಿ.ಮೀ.ಪ್ರಯಾಣ ನಡೆಸಲಾಗಿತ್ತು. ಈ ಮೊತ್ತವನ್ನು ಟಿಕೆಟ್ ಮೊತ್ತದಿಂದ ಗಳಿಸಲಾಗಿದೆ. ಸೇವೆ ಹೆಚ್ಚು ಲಾಭದಾಯಕವಾಗುತ್ತಿದ್ದಂತೆ, ಹೆಚ್ಚಿನ ಬಸ್‍ಗಳನ್ನು ಪ್ರಾರಂಭಿಸಲಾಗುವುದು. ಬಸ್ ಪರ್ಮಿಟ್ ಗೆ ಅರ್ಜಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಪರ್ಮಿಟ್ ನೀಡಿದ ಕೂಡಲೇ 100 ಬಸ್ ಗಳು ಸೇವೆ ಆರಂಭಿಸಲಿವೆ ಎಂದು ಕೆಎಸ್ ಆರ್ ಟಿಸಿ ಸ್ವಿಫ್ಟ್ ಮ್ಯಾನೇಜ್ ಮೆಂಟ್ ಮಾಹಿತಿ ನೀಡಿದೆ.
ಹೊಸ ಬಸ್ ಮತ್ತು ಮಾರ್ಗಗಳ ಲಭ್ಯತೆಯಿಂದಾಗಿ ಆದಾಯದಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ. ಇದೇ ವೇಳೆ ಕೆಎಸ್‍ಆರ್‍ಟಿಸಿ ಮಾರ್ಗ ವರ್ಗಾವಣೆ ವಿರುದ್ಧ ಹರಿಹಾಯ್ದಿತ್ತು. 310 ಸಿಎನ್‍ಜಿ ಬಸ್‍ಗಳು ಮತ್ತು 50 ಎಲೆಕ್ಟ್ರಿಕ್ ಬಸ್‍ಗಳು ಶೀಘ್ರದಲ್ಲೇ ಕಿಫ್ಬಿ ಸಹಾಯದಿಂದ ಕೆ ಸ್ವಿಫ್ಟ್‍ನ ಭಾಗವಾಗಲಿವೆ ಎಂದು ವರದಿಯಾಗಿದೆ.
ಎಸಿ ಸ್ಲೀಪರ್ ಬಸ್ 28,04,403, ಎಸಿ ಸೀಟ್ 15,66,415 ಮತ್ತು ನಾನ್ ಎಸಿ ಸೇವೆ 18,01,090 ರೂ. ಲಭಿಸಿದೆ.
ಪ್ರಸ್ತುತ, ಎಲ್ಲಾ ಎಂಟು ಎಸಿ ಸ್ಲೀಪರ್ ಬಸ್ಸುಗಳು ಬೆಂಗಳೂರಿಗೆ ಸಂಚರಿಸುತ್ತವೆ. ವಾರದ ದಿನಗಳಲ್ಲಿ ಪತ್ತನಂತಿಟ್ಟ-ಬೆಂಗಳೂರು, ಕೋಝಿಕ್ಕೋಡ್-ಬೆಂಗಳೂರು, ಚೆನ್ನೈ ಮತ್ತು ತಿರುವನಂತಪುರಂ-ಕೋಝಿಕೋಡ್ ಮಾರ್ಗವಾಗಿ ಎಸಿ ಆಸನದ ಬಸ್ಸುಗಳು ಸಂಚರಿಸುತ್ತವೆ.
ತಿರುವನಂತಪುರದಿಂದ ಕೋಝಿಕ್ಕೋಡ್, ಕಣ್ಣೂರು, ಸುಲ್ತಾನ್ ಬತ್ತೇರಿ ಮತ್ತು ಮಾನಂತವಾಡಿಗೆ ನಾನ್ ಎಸಿ ಸೇವೆಗಳು ಲಭ್ಯವಿವೆ.