ನವದೆಹಲಿ: ಫೋರ್ಬ್ಸ್ ವಾರ್ಷಿಕ ವಿಶ್ವದ ಬಿಲಿಯನೇರ್ ಪಟ್ಟಿ ಬಿಡುಗಡೆ ಮಾಡಿದ್ದು, ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಅಗ್ರಸ್ಥಾನ ಪಡೆದಿದ್ದಾರೆ. ಎಲೋನ್ ಮಸ್ಕ್ ಈ ವರ್ಷ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಅಗ್ರ ಸ್ಥಾನದಿಂದ ಕೆಳಗಿಳಿಸಿದ್ದಾರೆ.
ಇನ್ನೂ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ವಿಶ್ವದ 10ನೇ ಶ್ರೀಮಂತ ವ್ಯಕ್ತಿಯಾಗಿದ್ದು, ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಹಾಗೇ ಉಳಿಸಿಕೊಂಡಿದ್ದಾರೆ. 11ನೇ ಸ್ಥಾನದಲ್ಲಿ ಮೂಲಸೌಕರ್ಯ ಉದ್ಯಮಿ ಗೌತಮ್ ಅದಾನಿ ಅವರು ಇದ್ದಾರೆ.
ವಿಶ್ವದ ಶ್ರೀಮಂತ ಜನರ 36ನೇ ವಾರ್ಷಿಕ ಶ್ರೇಯಾಂಕದಲ್ಲಿ 2,668 ಬಿಲಿಯನೇರ್‌ಗಳಿದ್ದಾರೆ. ಈ ವರ್ಷದ ಪಟ್ಟಿಯಲ್ಲಿ 87 ಉದ್ಯಮಿಗಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಯುದ್ಧ, ಕೊರೋನಾ, ಜಡ ಮಾರುಕಟ್ಟೆ ಯಂತಹ ಸಮಸ್ಯೆಗಳ ನಡುವೆಯೂ 1,000 ಬಿಲಿಯನೇರ್‌ಗಳು ಒಂದು ವರ್ಷದ ಹಿಂದೆ ಇದ್ದುದ್ದಕ್ಕಿಂತ ಈಗ ಶ್ರೀಮಂತರಾಗಿದ್ದಾರೆ.
ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 236 ಹೊಸಬರು ಇದ್ದಾರೆ, ಒಟ್ಟು $4.7 ಟ್ರಿಲಿಯನ್ ಮೌಲ್ಯದ 735 ಬಿಲಿಯನೇರ್‌ಗಳೊಂದಿಗೆ ಅಮೆರಿಕ ಮುಂದಿದೆ.
ರಷ್ಯಾ ಮತ್ತು ಚೀನಾ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಕುಸಿತವನ್ನು ಕಂಡಿವೆ.