ನವದೆಹಲಿ: ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಏಪ್ರಿಲ್ ತಿಂಗಳಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 35. 9 ಮತ್ತು 37.78 ಡಿಗ್ರಿ ಸೆಲ್ಸಿಯಸ್ ನಷ್ಟು ತಲುಪುವುದರೊಂದಿಗೆ 122 ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಬಿಸಿಲಿನ ಅನುಭವಾಗಿದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ, ವಾಯುವ್ಯ ಮತ್ತು ಮಧ್ಯ ಭಾರತದ ಪ್ರದೇಶಗಳಾದ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ಮುಂದುವರೆಯಲಿದೆ ಎಂದು ತಿಳಿಸಿದರು.
ಮೇ ತಿಂಗಳಲ್ಲಿ ದಕ್ಷಿಣದ ಪರ್ಯಾಯ ಪ್ರಸ್ಥಭೂಮಿಯಂತಹ ಕೆಲವೊಂದು ವಲಯಗಳನ್ನು ಹೊರತುಪಡಿಸಿದರೆ ದೇಶದ ಬಹುತೇಕ ಕಡೆಗಳಲ್ಲಿ ರಾತ್ರಿ ವೇಳೆಯೂ ಬಿಸಿಯ ವಾತಾವರಣ ಇರಲಿದೆ ಎಂದು ಮೊಹಪಾತ್ರ ಹೇಳಿದರು. ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಸರಾಸರಿ 35. 05 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. 122 ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಈ ರೀತಿಯ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ ಎಂದು ಅವರು ತಿಳಿಸಿದರು.
ಮೇ ತಿಂಗಳಲ್ಲಿ ರಾಷ್ಟ್ರದಲ್ಲಿ ಸರಾಸರಿ ಮಳೆ ಸಾಮಾನ್ಯಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ. ಆದಾಗ್ಯೂ, ವಾಯುವ್ಯ ಮತ್ತು ಈಶಾನ್ಯ ಭಾರತದ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದರು.